ಅಮಿತ್ ಶಾ ರ‍್ಯಾಲಿ ವೇಳೆ ಸಿಎಎ ವಿರೋಧಿ ಬ್ಯಾನರ್ ಪ್ರದರ್ಶನ: ಮಹಿಳೆಯರನ್ನು ಮನೆಯಿಂದ ಹೊರಗಟ್ಟಿದ ಮಾಲಕ

Update: 2020-01-08 12:12 GMT
PHoto: twitter.com/AchingTruth

ಹೊಸದಿಲ್ಲಿ: ರಾಜಧಾನಿಯ ಲಜಪತ್ ನಗರದಲ್ಲಿ ರವಿವಾರ ಗೃಹ ಸಚಿವ ಅಮಿತ್ ಶಾ ಸಿಎಎ ಪರ ರ‍್ಯಾಲಿ ನಡೆಯುತ್ತಿದ್ದ ವೇಳೆ ತಮ್ಮ ಮನೆಯ ಬಾಲ್ಕನಿಯಿಂದ ಸಿಎಎ ವಿರೋಧಿ ಬ್ಯಾನರ್ ಹಿಡಿದು ನಿಂತಿದ್ದ ಇಬ್ಬರು ಮಹಿಳೆಯರನ್ನು ಅವರ ಮನೆ ಮಾಲಕ  ಮನೆಯಿಂದ ಹೊರಹಾಕಿದ್ದಾರೆ.

ತಾವು ಸಿಎಎ ವಿರೋಧಿ ಬ್ಯಾನರ್ ಹಿಡಿದಿದ್ದೇ ದೊಡ್ಡ ಅಪರಾಧವೆಂಬಂತೆ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಕೆಲ ಉದ್ರಿಕ್ತರು ಮನೆಯೊಳಕ್ಕೆ ನುಗ್ಗಲು ಯತ್ನಿಸಿದ್ದರೆಂದು ಮಹಿಳೆಯಲ್ಲೊಬ್ಬರು ದೂರಿದ್ದಾರೆ.

ಅಮಿತ್ ಶಾ ರ‍್ಯಾಲಿ ತಮ್ಮ ಮನೆ ಪಕ್ಕದಲ್ಲಿ ಹಾದು ಹೋಗಲಿದೆ ಎಂದು ತಿಳಿದ ನಂತರ ಸಿಎಎ ಬಗ್ಗೆ ತಮ್ಮ ವಿರೋಧವನ್ನು ತಿಳಿಯಪಡಿಸಲು ಇದುವೇ ತಕ್ಕ ಸಮಯವೆಂದು ಸಂವಿಧಾನದತ್ತವಾಗಿ ಪ್ರತಿಭಟಿಸುವ ಹಕ್ಕನ್ನು ಚಲಾಯಿಸಿದ್ದೇವೆ. "ಶೇಮ್, ಸಿಎಎ ಆ್ಯಂಡ್ ಎನ್‍ಆರ್‍ಸಿ, ಜೈ ಹಿಂದ್, ಆಝಾದಿ #ನಾಟ್‍ಇನ್‍ಮೈನೇಮ್'' ಎಂದು ಬರೆಯಲಾದ ಬ್ಯಾನರ್ ಬಾಲ್ಕನಿಯಲ್ಲಿ ನಿಂತು ಹಿಡಿದಿದ್ದಾಗಿ ಮಹಿಳೆಯರಲ್ಲೊಬ್ಬರಾದ ಸೂರ್ಯ ರಾಜಪ್ಪನ್ ಹೇಳಿದ್ದಾರೆ.

"ಇದನ್ನು ಗಮನಿಸಿದ ರ‍್ಯಾಲಿಯಲ್ಲಿ ಭಾಗವಹಿಸಿದವರು ನಮ್ಮನ್ನು ನಿಂದಿಸಿ ಬೆದರಿಸಲಾರಂಭಿಸಿದರು. ಕೆಲವರು ನಮ್ಮ ಮನೆ ಬಾಗಿಲನ್ನು ಬಡಿಯಲು ಆರಂಭಿಸಿದ್ದರು. ಪೊಲೀಸರು ಆಗಮಿಸುವ ತನಕ ಮೂರ್ನಾಲ್ಕು ಗಂಟೆಗಳ ಕಾಲ ಇದು ಮುಂದುವರಿದಿತ್ತು. ಕೊನೆಗೆ ಪೊಲೀಸರು ಹಾಗೂ ನಮ್ಮ ಸಂಬಂಧಿಕರ ಸತತ ಪ್ರಯತ್ನದ ನಂತರ ನಮ್ಮ ತಂದೆಯನ್ನು ಒಳಕ್ಕೆ ಬರಲು ಬಿಡಲಾಯಿತು. ನಮ್ಮನ್ನು ವಿರೋಧಿಸಿದವರಲ್ಲಿ ನಮ್ಮ ಮನೆ ಮಾಲಕ ಕೂಡ ಸೇರಿದ್ದು, ಕೊನೆಗೆ ಅವರು ನಮ್ಮನ್ನು ಮನೆ ಖಾಲಿ ಮಾಡುವಂತೆ ಹೇಳಿದ್ದರು ಎಂದು ಮಹಿಳೆಯರು  ತಿಳಿಸಿದ್ದಾರೆ. ಪೊಲೀಸ್ ರಕ್ಷಣೆಯಲ್ಲಿ ನಮ್ಮ ವಸ್ತುಗಳನ್ನು ತೆಗೆದುಕೊಂಡು ಅಲ್ಲಿಂದ ಹೊರಬಂದೆವು ಎಂದು ಮಹಿಳೆಯರು ಹೇಳಿದ್ದಾರೆ.

ಅವರು ತಮ್ಮ ಹೆತ್ತವರ ಜತೆಗೆ ಹೋಗಿರಬೇಕು ಎಂದು ಹೇಳಿರುವ ಮನೆ ಮಾಲಕ 'ಮನೆಯನ್ನೇಕೆ ತೆರವುಗೊಳಿಸಿದಿರಿ' ಎಂಬ ಪ್ರಶ್ನೆಗೆ ಅವರಿಗೆ ಮನೆಯನ್ನು ಬಾಡಿಗೆಗೆ ನೀಡಬಾರದಾಗಿತ್ತು ಎಂದಷ್ಟೇ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News