ಟರ್ಕಿಯಿಂದ ಈರುಳ್ಳಿ ಆಮದು: ಕೇಂದ್ರಕ್ಕೆ ಮಧ್ಯಪ್ರದೇಶ ಸರಕಾರದ ತರಾಟೆ

Update: 2020-01-08 14:35 GMT
ಸಾಂದರ್ಭಿಕ ಚಿತ್ರ

ಭೋಪಾಲ,ಜ.8: ಸ್ಥಳೀಯ ಈರುಳ್ಳಿ ಮಾರುಕಟ್ಟೆಗೆ ಬರುತ್ತಿರುವ ಈ ಸಮಯದಲ್ಲಿ ಅದನ್ನು ಟರ್ಕಿಯಿಂದ ಆಮದು ಮಾಡಿಕೊಳ್ಳುವ ಮೂಲಕ ಕೇಂದ್ರವು ರೈತರ ಹಿತಾಸಕ್ತಿಗಳಿಗೆ ಹಾನಿಯನ್ನುಂಟು ಮಾಡುತ್ತಿದೆ. ಆಮದು ಈರುಳ್ಳಿಯನ್ನು ಖರೀದಿಸುವಂತೆ ಅದು ಜನರ ಮೇಲೆ ಒತ್ತಡ ಹೇರುತ್ತಿದೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಸರಕಾರವು ಬುಧವಾರ ಆರೋಪಿಸಿದೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ಆರೋಪವನ್ನು ಮಾಡಿದ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರದ್ಯುಮ್ನ ಸಿಂಗ್ ಅವರು,ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 60 ರೂ.ವರೆಗೆ ತಲುಪಿದ್ದ ಸಂದರ್ಭ ನರೇಂದ್ರ ಮೋದಿಯವರು ‘ಕೇಂದ್ರವು ಬಡವರ ಅನ್ನವನ್ನು ಕಿತ್ತುಕೊಂಡಿದೆ ’ಎಂದು ಹೇಳಿದ್ದರು. ಆದರೆ ಈಗ ಮೋದಿ ಸರಕಾರದ ತಪ್ಪು ನಿರ್ಧಾರಗಳಿಂದಾಗಿ ಈರುಳ್ಳಿ ಬೆಲೆ ಕೆ.ಜಿ.ಗೆ 150-200 ರೂ.ತಲುಪಿದೆ. ಇಂತಹ ಸ್ಥಿತಿಯಲ್ಲಿಯೂ ರಾಜ್ಯದಲ್ಲಿ ಬೆಲೆಯನ್ನು ನಿಯಂತ್ರಿಸಿದ್ದೇವೆ ಎಂದರು.

ಕಳೆದೆರಡು ತಿಂಗಳುಗಳಿಂದ ಪ್ರತಿ ಕೆಜಿಗೆ 100 ರೂ.ಗಳ ಆಸುಪಾಸಿನಲ್ಲಿದ್ದ ಈರುಳ್ಳಿಯ ಬೆಲೆ ಬುಧವಾರ ಭೋಪಾಲ ಮತ್ತು ರಾಜ್ಯದ ಇತರ ನಗರಗಳಲ್ಲಿ ಪ್ರತಿ ಕೆ.ಜಿ.ಗೆ 50 ರೂ.ನಿಂದ 70 ರೂ.ವರೆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News