ಸಿಆರ್‌ಪಿಎಫ್‌ನಿಂದ ತಪ್ಪಿಸಿಕೊಳ್ಳುವಾಗ ಕಾಶ್ಮೀರ ಯುವಕನ ಸಾವು: ಕೊನೆಗೂ ಒಪ್ಪಿಕೊಂಡ ಪೊಲೀಸರು

Update: 2020-01-08 14:58 GMT
ಫೋಟೊ ಕೃಪೆ: scroll.in

ಶ್ರೀನಗರ, ಜ.8: ಆಗಸ್ಟ್ 5ರಂದು ಶ್ರೀನಗರದಲ್ಲಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ 17 ವರ್ಷದ ಯುವಕ ಅರೆಸೇನಾ ಪಡೆಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಮೃತಪಟ್ಟಿರುವುದನ್ನು ಕಡೆಗೂ ಪೊಲೀಸರು ಒಪ್ಪಿಕೊಂಡಿದ್ದಾರೆ. 17 ವರ್ಷದ ಉಸೈಬ್ ಅಲ್ತಾಫ್ ಮರಝಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಆರೋಪಿಸಲಾಗಿತ್ತು.

 ಆದರೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹೇಳಿಕೊಂಡಿದ್ದರು. ಅಲ್ತಾಫ್ ಮೃತಪಟ್ಟಿದ್ದಾನೆ ಎಂಬ ಆರೋಪ ಆಧಾರರಹಿತ ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ಜಮ್ಮು ಕಾಶ್ಮೀರ ಹೈಕೋರ್ಟ್‌ನ ಬಾಲನ್ಯಾಯ ಸಮಿತಿಗೆ ಸಲ್ಲಿಸಿದ್ದ ವರದಿಯಲ್ಲಿ ಪೊಲೀಸರು ತಿಳಿಸಿದ್ದರು. ಅಲ್ತಾಫ್ ನದಿಯಲ್ಲಿ ಮುಳುಗಿ ಮೃತಪಟ್ಟಿರುವುದನ್ನು ಕಡೆಗೂ ಪೊಲೀಸರು ಒಪ್ಪಿಕೊಂಡಿದ್ದು, ವಿಚಾರಣೆ ಪ್ರಕ್ರಿಯೆ ಆರಂಭಿಸುವಂತೆ ಶ್ರೀನಗರ ಜಿಲ್ಲಾ ಮ್ಯಾಜಿಸ್ಟ್ರೇಟ್‌ರನ್ನು ಕೋರಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಡಿಸೆಂಬರ್ 2ರಂದು ಪರಿಂಪೋರ ಪೊಲೀಸ್ ಠಾಣೆಯ ಅಧಿಕಾರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಿದ್ದ ಸ್ಥಿತಿಗತಿ ವರದಿಯಲ್ಲಿ ‘24 ವರ್ಷದ ಅಲ್ತಾಫ್ ಎಂಬಾತ ಝೇಲಂ ನದಿಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಹೇಳಲಾಗಿದೆ’ ಎಂದು ಉಲ್ಲೇಖಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಕೇಂದ್ರ ಸರಕಾರ ಆಗಸ್ಟ್ 5ರಂದು ಘೋಷಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ವಿಧಿಸಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿತ್ತು.

ಈ ಸಂದರ್ಭ ಪರಿಂಪೋರ ನಗರದ ರಸ್ತೆಯೊಂದರಲ್ಲಿ ಸುಮಾರು 10 ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಉಸೈಬ್ ಅಲ್ತಾಫ್ ಮರಝಿಯನ್ನು ರಸ್ತೆಯ ಇಕ್ಕೆಲದಿಂದ ಬಂದ ಸಿಆರ್‌ಪಿಎಫ್ ಯೋಧರು ಸುತ್ತುವರಿದಿದ್ದಾರೆ. ಯೋಧರನ್ನು ಕಂಡು ಹೆದರಿದ ಅಲ್ತಾಫ್ ರಸ್ತೆಯ ಬದಿಯಲ್ಲಿದ್ದ ನದಿಗೆ ಧುಮುಕಿದ್ದು ಈಜು ಬಾರದ ಕಾರಣ ಮುಳುಗಿ ಮೃತಪಟ್ಟಿರುವುದಾಗಿ ಕುಟುಂಬದ ಸದಸ್ಯರು ಹಾಗೂ ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದರು.

 ಈಗ ಪೊಲೀಸರು ಸಲ್ಲಿಸಿರುವ ಸ್ಥಿತಿಗತಿ ವರದಿ ಅಲ್ತಾಫ್ ಕುಟುಂಬದವರ ಹೇಳಿಕೆಗೆ ಪುಷ್ಟಿ ನೀಡಿದಂತಾಗಿದೆ ಎಂದು ಸುದ್ದಿಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News