ಭೀಮಾ-ಕೋರೆಗಾಂವ್ ಪ್ರಕರಣ: ಸ್ಥಿತಿಗತಿ ವರದಿ ಕೇಳಿದ ಮಹಾರಾಷ್ಟ್ರ ಗೃಹಸಚಿವ
ಮುಂಬೈ,ಜ.9: ಭೀಮಾ-ಕೋರೆಗಾಂವ್ ಪ್ರಕರಣದ ಕುರಿತು ವಿವರವಾದ ವರದಿಯನ್ನು ಸಲ್ಲಿಸುವಂತೆ ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶಮುಖ್ ಅವರು ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ. ತಿಂಗಳ ಹಿಂದಷ್ಟೇ ಎನ್‌ಸಿಪಿ ಅಧ್ಯಕ್ಷ ಶರದ ಪವಾರ್ ಅವರು,ಪುಣೆ ಪೊಲೀಸರು ಸಾಮಾಜಿಕ ಹೋರಾಟಗಾರರನ್ನು ತಪ್ಪಾಗಿ ಗುರಿಯಾಗಿಸಿಕೊಂಡಿದ್ದಾರೆ ಮತ್ತು ‘ನಗರ ನಕ್ಸಲರು’ಎಂಬ ಸುಳ್ಳು ಆರೋಪದಲ್ಲಿ ಅವರನ್ನು ಬಂಧಿಸಿದ್ದಾರೆ ಎಂದು ಹೇಳಿದ್ದರು.
ಇಲ್ಲಿ ಸುದ್ದಿಗಾರರೊಡನೆ ಮಾತನಾಡಿದ ದೇಶಮುಖ್, ಭೀಮಾ-ಕೋರೆಗಾಂವ ಪ್ರಕರಣದ ಸ್ಥಿತಿಗತಿ,ತನಿಖೆ ಮತ್ತು ನಂತರದ ಬೆಳವಣಿಗೆಗಳ ಕುರಿತು ಸಾಕ್ಷಗಳ ಸಹಿತ ವಿವರವಾದ ವರದಿಯನ್ನು ತಾನು ಕೇಳಿದ್ದೇನೆ. ದೇವೇಂದ್ರ ಫಡ್ನವೀಸ್ ನೇತೃತ್ವದ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಆಡಳಿತದ ವಿರುದ್ಧ ಯಾರೇ ಮಾತನಾಡಿದರೂ ಅವರಿಗೆ ‘ನಗರ ನಕ್ಸಲ್’ ಎಂಬ ಹಣೆಪಟ್ಟಿ ಅಂಟಿಸಲಾಗುತ್ತಿತ್ತು. ಪ್ರಕರಣದಲ್ಲಿ ಹೊಸದಾಗಿ ತನಿಖೆ ನಡೆಯಬೇಕು ಮತ್ತು ಆರೋಪಗಳ ಪುನರ್‌ಪರಿಶೀಲನೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಪವಾರ್ ಕೂಡ ಬಯಸಿದ್ದಾರೆ ಎಂದು ತಿಳಿಸಿದರು.
ಪುಣೆ ಪೊಲೀಸರು ಸಾಕ್ಷಗಳನ್ನು ತಿರುಚಿದ್ದಾರೆ ಮತ್ತು ಒಂಭತ್ತು ಹೋರಾಟಗಾರರು ಹಾಗೂ ವಕೀಲರನ್ನು ಒಂದೂವರೆ ವರ್ಷಗಳಿಂದ ಬಂಧನದಲ್ಲಿರಿಸುವ ಮೂಲಕ ತಪ್ಪು ಮಾಡಿದ್ದಾರೆ ಎಂದು ಹಿರಿಯ ಎನ್‌ಸಿಪಿ ನಾಯಕ ಮತ್ತು ವಸತಿ ಸಚಿವ ಜಿತೇಂದ್ರ ಅವಾದ್ ಅವರು ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಆರೋಪಿಸಿದಾಗಿನಿಂದ ಈ ವಿಷಯವು ಚುರುಕು ಪಡೆದುಕೊಂಡಿತ್ತು.
ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸರಕಾರಿ ವಕೀಲರ ಸಭೆಯನ್ನು ಕರೆಯಲಿದ್ದೇನೆ. ಪ್ರಕರಣದ ವಿವರಗಳು,ನ್ಯಾಯಾಲಯಗಳ ಆದೇಶಗಳು ಮತ್ತು ಸರಕಾರದಿಂದ ನೇಮಕಗೊಂಡ ಸಮಿತಿಯು ಪ್ರಕರಣದಲ್ಲಿ ನಡೆಸಿರುವ ವಿಚಾರಣೆಗಳ ಕುರಿತು ವರದಿಯನ್ನು ಸಲ್ಲಿಸುವಂತೆ ತಾನು ಸೂಚಿಸಿದ್ದೇನೆ ಎಂದೂ ದೇಶಮುಖ್ ತಿಳಿಸಿದರು.