ಪದೇ ಪದೇ ಸೆಕ್ಷನ್ 144 ಬಳಕೆ ಅಧಿಕಾರದ ದುರುಪಯೋಗ: ಸುಪ್ರೀಂಕೋರ್ಟ್
ಹೊಸದಿಲ್ಲಿ, ಜ.10: ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಲು ಹಾಗೂ ಪ್ರತಿಭಟನೆಯನ್ನು ಹತ್ತಿಕ್ಕಲು ಬ್ರಿಟಿಷರ ಕಾಲದ ವಿಧಿ 144ನ್ನು ಪದೇ ಪದೇ ಬಳಸುವುದು ಅಧಿಕಾರದ ದುರುಪಯೋಗವಾಗಿದೆ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಶುಕ್ರವಾರ ತಿಳಿಸಿದೆ.
ಜಮ್ಮು-ಕಾಶ್ಮೀರದಲ್ಲಿ ವಿಧಿ 370ನ್ನು ಹಿಂಪಡೆದ ಬಳಿಕ ಕೇಂದ್ರ ಸರಕಾರ ಇಂಟರ್‌ನೆಟ್ ಸೇವೆ ಸಹಿತ ಹಲವು ನಿರ್ಬಂಧಗಳನ್ನು ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಯಾವುದೆ ಪ್ರಜಾಪ್ರಭುತ್ವ ಹಕ್ಕುಗಳ ನ್ಯಾಯ ಸಮ್ಮತವಾದ ಅಭಿವ್ಯಕ್ತಿ ಅಥವಾ ಕುಂದುಕೊರತೆಯನ್ನು ತಡೆಯಲು ಸೆಕ್ಷನ್ 144ನ್ನು ಒಂದು ಸಾಧನವಾಗಿ ಬಳಸಲಾಗುವುದಿಲ್ಲ. ಸಂವಿಧಾನವು ವಿಭಿನ್ನ ದೃಷ್ಟಿಕೋನಗಳ ಅಭಿವ್ಯಕ್ತಿಯನ್ನು ರಕ್ಷಿಸುತ್ತದೆ. ಸಾರ್ವಜನಿಕರ ಸುರಕ್ಷತೆಗೆ ಬೆದರಿಕೆ ಇದೆ ಎಂದು ಸಾಕಷ್ಟು ಪುರಾವೆಗಳಿಲ್ಲದೆ ಸೆಕ್ಷನ್ 144ನ್ನು ಹೇರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅನಿರ್ದಿಷ್ಟಾವಧಿಗೆ ಅಂತರ್ಜಾಲ ಸೇವೆಗಳನ್ನು ನಿರ್ಬಂಧಿಸುವ ಸರಕಾರದ ನಡೆಯನ್ನು ಟೀಕಿಸಿದ ಜಸ್ಟಿಸ್ ಎನ್‌ವಿ ರಮಣ, ಆರ್.ಸುಭಾಶ್ ರೆಡ್ಡಿ ಹಾಗೂ ಬಿಆರ್ ಗವಾಯಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಅಂತರ್ಜಾಲ ಹಕ್ಕು ಎನ್ನುವುದು ವಾಕ್ ಹಾಗೂ ಅಭಿವೃಕ್ತಿ ಸ್ವಾತಂತ್ರದ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟಿದೆ.