ಪ್ರಧಾನಿ ಮೋದಿಗೆ ಅರ್ಥಶಾಸ್ತ್ರ ಗೊತ್ತಿಲ್ಲ, ಅವರು ನನ್ನನ್ನು ವಿತ್ತಸಚಿವ ಮಾಡಬೇಕು: ಸುಬ್ರಮಣಿಯನ್ ಸ್ವಾಮಿ
ಹೊಸದಿಲ್ಲಿ,ಜ.10: ಪ್ರಧಾನಿ ನರೇಂದ್ರ ಮೋದಿಯವರಿಗೆ ಅರ್ಥಶಾಸ್ತ್ರ ಅರ್ಥವಾಗುವುದಿಲ್ಲ,ಹೀಗಾಗಿ ಅವರು ತನ್ನನ್ನು ವಿತ್ತಸಚಿವನಾಗಿ ಮಾಡಬೇಕು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ. ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಕುರಿತಂತೆ ಅವರು ‘ಕಡಿಮೆ ಹೇಳಿದಷ್ಟೂ ಒಳ್ಳೆಯದು’ಎಂದಿದ್ದಾರೆ.
ಮಾಜಿ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ವಿರುದ್ಧ ದಾಳಿ ನಡೆಸಿದ ಸ್ವಾಮಿ,‘ಅಮೆರಿಕದ ಆ ಹುಚ್ಚು ಮನುಷ್ಯ ’ನಿರಂತರವಾಗಿ ಬಡ್ಡಿದರಗಳನ್ನು ಹೆಚ್ಚಿಸಿದ್ದರು ಮತ್ತು ಇದೇ ಕಾರಣದಿಂದಾಗಿ ಬಂಡವಾಳ ಹೂಡಿಕೆ ವೆಚ್ಚವು ಹೆಚ್ಚಾಯಿತು ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚತೊಡಗಿದವು ಎಂದು ಹೇಳಿದರು.
ಗುರುವಾರ ಚೆನ್ನೈನಲ್ಲಿ ‘ಥಿಂಕ್ ಎಜ್ಯು ಕಾಂಕ್ಲೇವ್’ನಲ್ಲಿ ಮಾತನಾಡುತ್ತಿದ್ದ ಅವರು,ಅರ್ಥಶಾಸ್ತ್ರವು ಬೃಹತ್ ವಿಷಯವಾಗಿದ್ದು,ಒಂದು ಕ್ಷೇತ್ರವು ಇನ್ನೊಂದು ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಜೆಎನ್‌ಯುಗೆ ಹೋಗಿ ಪದವಿ ಪಡೆದ ತಕ್ಷಣ ಎಲ್ಲವನ್ನೂ ಕಲಿಯಲು ಸಾಧ್ಯವಿಲ್ಲ ಎಂದು ಸೀತಾರಾಮನ್ ಅವರನ್ನು ಗುರಿಯಾಗಿಸಿಕೊಂಡು ಟೀಕಿಸಿದರು.