ಎಟಿಪಿ ಕಪ್: ವಿಶ್ವದ ನಂ.1 ಆಟಗಾರ ನಡಾಲ್‌ಗೆ ಗಾಫಿನ್ ಶಾಕ್

Update: 2020-01-10 18:58 GMT

ಸಿಡ್ನಿ, ಜ.10: ಮೊದಲ ಆವೃತ್ತಿಯ ಎಟಿಪಿ ಕಪ್ ಟೀಮ್ ಇವೆಂಟ್‌ನ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್‌ರನ್ನು ಮಣಿಸಿದ ಡೇವಿಡ್ ಗಾಫಿನ್ ಬೆಲ್ಜಿಯಂ ತಂಡದ ಮುಂದಿನ ಸುತ್ತಿಗೇರುವ ವಿಶ್ವಾಸವನ್ನು ಜೀವಂತವಾಗಿರಿಸಿದ್ದಾರೆ. ವಿಶ್ವದ 11ನೇ ರ್ಯಾಂಕಿನ ಆಟಗಾರ ಗಾಫಿನ್ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸ್ಪೇನ್‌ನ ದಿಗ್ಗಜ ಆಟಗಾರ ನಡಾಲ್‌ರನ್ನು 6-4, 7-6(3) ಸೆಟ್‌ಗಳ ಅಂತರದಿಂದ ಮಣಿಸಿದರು. ಸ್ಪೇನ್ ತಂಡ ಮೊದಲ ಸಿಂಗಲ್ಸ್ ಪಂದ್ಯವನ್ನು ಜಯಿಸಿರುವ ಹಿನ್ನೆಲೆಯಲ್ಲಿ ಡಬಲ್ಸ್ ಪಂದ್ಯ ಅತ್ಯಂತ ಮುಖ್ಯವಾಗಿದೆ. ಸಿಂಗಲ್ಸ್ ಪಂದ್ಯದಲ್ಲಿ ಸ್ಪೇನ್‌ನ ರಾಬರ್ಟೊ ಬೌಟಿಸ್ಟ ಅಗುಟ್ ಅವರು ಕಿಮ್ಮರ್ ಕಾಪೆಜನ್ಸ್‌ರನ್ನು 6-1, 6-4 ನೇರ ಸೆಟ್‌ಗಳಿಂದ ಸೋಲಿಸಿದರು. ನಿರ್ಣಾಯಕ ಡಬಲ್ಸ್ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಶನಿವಾರದ ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ. ವಿಶ್ವದ ನಂ.2ನೇ ಆಟಗಾರ ನೊವಾಕ್ ಜೊಕೊವಿಕ್ ನಾಯಕತ್ವದ ಸರ್ಬಿಯ ತಂಡ ಸೆಮಿ ಫೈನಲ್‌ನಲ್ಲಿರಶ್ಯವನ್ನು ಎದುರಿಸಲಿದೆ. ಕೆನಡಾದ ಉದಯೋನ್ಮುಖ ಸ್ಟಾರ್ ಆಟಗಾರ ಡೆನಿಸ್ ಶಪೊವಾಲೊವ್‌ರನ್ನು 4-6, 6-1, 7-6(4)ಅಂತರದಿಂದ ಮಣಿಸಿದ ಜೊಕೊವಿಕ್ ಸರ್ಬಿಯ ತಂಡವನ್ನು ಸೆಮಿ ಫೈನಲ್ ತಲುಪಿಸಿದರು. ಜೊಕೊವಿಕ್ 20ರ ಹರೆಯದ ಶಪೊವಾಲೊವ್ ವಿರುದ್ಧ ಆಡಿರುವ ಐದನೇ ಪಂದ್ಯವನ್ನು ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News