‘ವಿವೇಕ’ ಚಿಂತನೆಗಳು

Update: 2020-01-11 18:30 GMT

ಹುಸಿ ಅಭಿಮಾನವಿಲ್ಲ

ನನಗೆ ದೇಶದ ಬಗ್ಗೆ ಹುಸಿ ಅಭಿಮಾನವಿಲ್ಲ. ನಾನೆಷ್ಟು ಭಾರತೀಯನೋ ಅಷ್ಟೇ ಜಾಗತಿಕ. ನನ್ನ ಮೇಲೆ ಯಾವ ದೇಶದ ಹಕ್ಕೂ ಇಲ್ಲ. ನಾನು ಯಾವ ದೇಶದ ಗುಲಾಮನೂ ಅಲ್ಲ. ಶ್ರದ್ಧಾಹೀನ ನಾಸ್ತಿಕತೆ, ಮೂರ್ಖರಂತೆ ಏನೇನೋ ವಟಗುಟ್ಟಬೇಡಿ... ಕೇವಲ ಸುಶಿಕ್ಷಿತ ಹಿಂದೂಗಳಲ್ಲೇ ಗೋಚರಿಸುವ ಜಾತ್ಯಂಧ, ಧರ್ಮ ಭೋಳೆ, ನಿರ್ದಯ, ಡಾಂಭಿಕ, ನಾಸ್ತಿಕರಲ್ಲಿಯ ಒಬ್ಬ ಹೇಡಿಯಂತೆ ಬದುಕಲೆಂದು ನಾನು ಹುಟ್ಟಿ ಬರಲಿಲ್ಲ...

-ಸ್ವಾಮಿ ವಿವೇಕಾನಂದ

(1895-ಸೆಪ್ಟ್ಟಂಬರ್ 5ರಂದು ಪ್ಯಾರಿಸ್‌ನಿಂದ ಅಳಸಿಂಗ ಪೆರುಮಾಳ್ ಅವರಿಗೆ ಬರೆದ ಪತ್ರದಲ್ಲಿ )

•••••••••••••••••••••

ಇಸ್ಲಾಮ್ ಧರ್ಮದ ವೈಶಿಷ್ಟ್ಯ

ಸರಳ ಸುಲಭ ಬೋಧನೆಯೇ ಇಸ್ಲಾಮ್ ಧರ್ಮದ ವೈಶಿಷ್ಟ್ಯ. ಅರ್ಥವಾಗದ ತತ್ವಜ್ಞಾನದ ಸಿದ್ಧಾಂತಗಳ ಚರ್ಚೆ ಆ ಧರ್ಮದಲ್ಲಿ ಇಲ್ಲ. ಸಮತೆ ಎರಡನೆಯ ವೈಶಿಷ್ಟ್ಯ. ದೇವರೆದುರು ಎಲ್ಲರೂ ಸಮಾನರು, ದೇವರ ಮತ್ತು ಮಾನವರ ನಡುವೆ ಯಾವ ಪುರೋಹಿತರೂ ಅಲ್ಲಿಲ್ಲ

 (ಮಾರ್ಚ್ 25, 1900ರಲ್ಲಿ ಕ್ಯಾಲಿಫೋರ್ನಿಯದಲ್ಲಿ ಮುಹಮ್ಮದ್ ಪೈಗಂಬರ್ ಕುರಿತ ಉಪನ್ಯಾಸದಲ್ಲಿ)

•••••••••••••••••••••

ರಕ್ತಬಸಿದು ಪಾದ ತೊಳೆಯುತ್ತಿದ್ದೆ

ಜೀಸಸ್ ಬದುಕಿದ್ದ ದಿನಗಳಲ್ಲಿ ನಾನೇನಾದರೂ ಫೆಲೆಸ್ತೀನ್‌ನಲ್ಲಿದ್ದಿದ್ದರೆ ಕಣ್ಣೀರಿನಿಂದಲ್ಲ, ನನ್ನ ಹೃದಯದಿಂದ ರಕ್ತಬಸಿದು ಆತನ ಪಾದ ತೊಳೆಯುತ್ತಿದ್ದೆ.

•••••••••••••••••••••

ಏಕೈಕ ಆಶಾ ಸ್ಥಾನ

ನಮ್ಮ ಮಾತೃ ಭೂಮಿಯ ದೃಷ್ಟಿಯಿಂದ ವೇದದ ತತ್ವ ಜ್ಞಾನ ಮತ್ತು ಇಸ್ಲಾಮಿನ ಸಮತೆಯ ಸಮನ್ವಯವೇ ಏಕೈಕ ಆಶಾ ಸ್ಥಾನವಾಗಿದೆ.

(ವಿವೇಕಾನಂದರು ಜೂನ್ 10, 1898ರಲ್ಲಿ ಅಲ್ಮೊರಾದಿಂದ ಶಿಷ್ಯ ಮಹಮದಾನಂದನಿಗೆ ಬರೆದ ಪತ್ರ-ಮುಹಮ್ಮದ್ ಸರ್ಫ್ರಾಝ್ ಎಂಬವರು ವಿವೇಕಾನಂದರ ಶಿಷ್ಯರಾಗಿದ್ದರು. ಅವರಿಗೆ ವಿವೇಕಾನಂದರು ಮಹಮದಾನಂದ ಎಂದು ಹೆಸಟ್ಟಿದ್ದರು)

•••••••••••••••••••••

ಹಸಿದವರಿಗೆ ಅನ್ನ ನೀಡಲಾರಿರಿ

ಹಸಿದವರಿಗೆ ಅನ್ನ ನೀಡದೆ ಗೋವುಗಳಿಗೆ ಧಾನ್ಯದ ರಾಶಿಯನ್ನೇ ಸುರಿಯುತ್ತೀರಿ. ನನಗೆ ಅಂಥವರ ಬಗ್ಗೆ ಕಿಂಚಿತ್ತೂ ಸಹಾನುಭೂತಿಯಿಲ್ಲ. ಗೋವುಗಳು ಸಹ ಅವುಗಳ ಕರ್ಮದಿಂದಲೇ ಕಸಾಯಿ ಖಾನೆ ಸೇರಿ ಸಾಯುತ್ತವೆ ಎನ್ನಬಹುದಲ್ಲ.

(ರಾಮಕೃಷ್ಣ ಮಠ ಪ್ರಕಟಿಸಿದ ‘ಸ್ವಾಮಿ ವಿವೇಕಾನಂದ ಗ್ರಂಥಾವಳಿ’ -10ನೇ ಸಂಪುಟ)

•••••••••••••••••••••

ಪ್ರತಿಯೊಬ್ಬರಲ್ಲೂ ಅನಂತಾತ್ಮನಿದ್ದಾನೆಂದು ಅರಿಯಿರಿ

ಹೇ ಬ್ರಾಹ್ಮಣರೇ, ವಂಶಪಾರಂಪರ್ಯದ ಕಾರಣದಿಂದ ಬ್ರಾಹ್ಮಣರಿಗೆ ಅಸ್ಪೃಶ್ಯರಿಗಿಂತ ಹೆಚ್ಚು ಶೈಕ್ಷಣಿಕ ಯೋಗ್ಯತೆಯಿದ್ದರೆ ಅಸ್ಪೃಶ್ಯರ ಶಿಕ್ಷಣಕ್ಕೆ ನಿಮ್ಮೆಲ್ಲ ಹಣವನ್ನೂ ಖರ್ಚು ಮಾಡಿ... ಪ್ರತಿಯೊಬ್ಬ ಮಹಿಳೆ, ಪುರುಷ ಮತ್ತು ಮಗು-ಜಾತಿ, ಕುಲ ಗೋತ್ರಗಳ ಭೇದವಿಲ್ಲದೆ, ದುರ್ಬಲ - ಸಬಲ ಎಂಬ ವ್ಯತ್ಯಾಸವಿಲ್ಲದೆ, ಉಚ್ಚ-ನೀಚ ಎಂದು ನೋಡದೆ, ಪ್ರತಿಯೊಬ್ಬರಲ್ಲೂ ಅನಂತಾತ್ಮನಿದ್ದಾನೆಂದು ಅರಿಯಿರಿ

(ಕೃತಿ ಶ್ರೇಣಿ : ಸಂಪುಟ - 5)

•••••••••••••••••••••

ಇವುಗಳೊಡನೆ ನನಗೆ ಸ್ವಲ್ಪವೂ ಸಹಾನುಭೂತಿಯಿಲ್ಲ

ಯಾವ ಸಭಾ ಸಮಿತಿಗಳು ಮನುಷ್ಯರಲ್ಲಿ ಸಹಾನುಭೂತಿಯನ್ನು ತೋರದೆ, ತಮ್ಮ ಅಣ್ಣತಮ್ಮಂದಿರು ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆಂದು ನೋಡಿಯೂ ಅವರ ಜೀವವನ್ನು ಉಳಿಸುವುದಕ್ಕಾಗಿ ಒಂದು ತುತ್ತು ಅನ್ನವನ್ನು ಕೊಡದೆ ಪಶು ಪಕ್ಷಿಗಳ ರಕ್ಷಣೆಗಾಗಿ ರಾಶಿ ರಾಶಿ ಅನ್ನವನ್ನು ದಾನ ಮಾಡುತ್ತವೆಯೋ ಅವುಗಳೊಡನೆ ನನಗೆ ಸ್ವಲ್ಪವೂ ಸಹಾನುಭೂತಿಯಿಲ್ಲ. ಅವುಗಳಿಂದ ಸಮಾಜಕ್ಕೆ ಹೆಚ್ಚು ಉಪಕಾರವಾಗುತ್ತದೆಂದು ನಾನು ನಂಬುವುದಿಲ್ಲ. ಕರ್ಮಫಲದಿಂದ ಜನರು ಸಾಯುತ್ತಾರೆ ಎಂದು ಕರ್ಮದ ನೆವವನ್ನು ಹೇಳುವುದಾದರೆ ಜಗತ್ತಿನ ಯಾವ ವಿಷಯದಲ್ಲಿಯೂ ಕೆಲಸ ಮಾಡುವುದೇ ನಿಷ್ಪ್ರಯೋಜಕವೆಂದು ಒಟ್ಟಿಗೆ ನಿಶ್ಚಯಿಸಬಹುದು. ನಮ್ಮ ಪಶುರಕ್ಷಣೆಯ ಕೆಲಸವೂ ಆಮೇಲೆ ನಡೆಯುವುದಿಲ್ಲ. ಈ ಕೆಲಸದ ವಿಚಾರದಲ್ಲಿಯೂ ಗೋಮಾತೆಗಳು ತಮ್ಮ ತಮ್ಮ ಕರ್ಮಫಲದಿಂದಲೇ ಕಟುಕರ ಕೈಗೆ ಹೋಗುತ್ತವೆ ಮತ್ತು ಸಾಯುತ್ತವೆ, ಆದ್ದರಿಂದ ಅದಕ್ಕೆ ನಾವು ಏನೂ ಮಾಡಬೇಕಾದ ಅವಶ್ಯಕತೆಯಿಲ್ಲ ಎಂದು ಹೇಳಬಹುದು.

•••••••••••••••••••••

ಸಮಾನತೆಯ ಅಗತ್ಯ

ಮುಸ್ಲಿಮರ ಮಧ್ಯೆ ಪರಿಪೂರ್ಣವಾದ ಸಮಾನತೆ ಹಾಗೂ ಭ್ರಾತೃತ್ವವನ್ನು ಮುಹಮ್ಮದ್ ಪೈಗಂಬರ್ ಅವರು ತೋರಿಸಿಕೊಟ್ಟರು. ಜನಾಂಗ, ಜಾತಿ, ವಂಶ, ವರ್ಣ ಅಥವಾ ಲಿಂಗ ಭೇದದ ಪ್ರಶ್ನೆ ಅಲ್ಲಿರಲಿಲ್ಲ. ಆಫ್ರಿಕದ ಮಾರುಕಟ್ಟೆಯಿಂದ ಖರೀದಿಸಿ ತುರ್ಕಿಗೆ ಕರೆತಂದ ನೀಗ್ರೊ ಗುಲಾಮನೊಬ್ಬ ಮುಸ್ಲಿಮನಾದಲ್ಲಿ ಮತ್ತು ಸಾಕಷ್ಟು ಅರ್ಹತೆ ಹಾಗೂ ಸಾಮರ್ಥ್ಯಗಳನ್ನು ಹೊಂದಿದ್ದಲ್ಲಿ, ಆತ ಸುಲ್ತಾನನ ಪುತ್ರಿಯನ್ನು ಕೂಡಾ ವಿವಾಹವಾಗಬಹುದಾಗಿದೆ. ಇದರೊಂದಿಗೆ, ಅಮೆರಿಕದಲ್ಲಿ ನೀಗ್ರೊಗಳನ್ನು ಮತ್ತು ಅಮೆರಿಕನ್ ಇಂಡಿಯನ್ನರನ್ನು ನಡೆಸಿಕೊಳುತ್ತಿರುವ ರೀತಿಯನ್ನು ಹೋಲಿಸಿಕೊಳ್ಳಿ!. ಆದರೆ, ಇಸ್ಲಾಮಿನಲ್ಲಿ ಜನಾಂಗ ಹಾಗೂ ವರ್ಣಭೇದದಿಂದ ಹೊರತಾದ ಪರಿಪೂರ್ಣವಾದ ಸಮಾನತೆಯನ್ನು ನೀವು ಕಾಣುವಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News