ಕರ್ನಾಟಕದ ವಿರುದ್ಧ ಸೌರಾಷ್ಟ್ರ ಭರ್ಜರಿ ಆರಂಭ

Update: 2020-01-11 18:34 GMT

ರಾಜ್‌ಕೋಟ್, ಜ.11: ಚೇತೇಶ್ವರ ಪೂಜಾರ(162 ಬ್ಯಾಟಿಂಗ್, 238 ಎಸೆತ, 17 ಬೌಂಡರಿ, 1 ಸಿಕ್ಸರ್)ಹಾಗೂ ಶೆಲ್ಡನ್ ಜಾಕ್ಸನ್(ಔಟಾಗದೆ 99, 191 ಎಸೆತ, 4 ಬೌಂಡರಿ, 2 ಸಿಕ್ಸರ್)ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಸೌರಾಷ್ಟ್ರ ತಂಡ ಶನಿವಾರ ಇಲ್ಲಿ ಆರಂಭವಾದ ಕರ್ನಾಟಕ ವಿರುದ್ಧದ ರಣಜಿ ಟ್ರೋಫಿಯ‘ಬಿ’ ಗುಂಪಿನ ಪಂದ್ಯದಲ್ಲಿ ಭರ್ಜರಿ ಆರಂಭ ಪಡೆದಿದೆ.

ಇಲ್ಲಿನ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ಒಂದು ಹಂತದಲ್ಲಿ 33 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆ ಬಳಿಕ ಸುಮಾರು 70 ಓವರ್‌ಗಳ ಕಾಲ ಕರ್ನಾಟಕದ ಬೌಲರ್‌ಗಳನ್ನು ಕಾಡಿದ ಪೂಜಾರ ಹಾಗೂ ಶೆಲ್ಡನ್ 3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 263 ರನ್ ಸೇರಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 50ನೇ ಶತಕವನ್ನು ಸಿಡಿಸಿದ ಪೂಜಾರ ಅವರು ಜಾಕ್ಸನ್‌ರೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಪೂಜಾರ ಈ ಋತುವಿನಲ್ಲಿ ಮೊದಲ ಶತಕ ಗಳಿಸಿದರು.

ಜಾಕ್ಸನ್ 98 ರನ್ ಗಳಿಸಿದ್ದಾಗ ವೇಗದ ಬೌಲರ್ ಪ್ರತೀಕ್ ಜೈನ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಬಿ.ಆರ್.ಶರತ್‌ರಿಂದ ಜೀವದಾನ ಪಡೆದಿದ್ದಾರೆ.

 ಕರ್ನಾಟಕದ ಅಶಿಸ್ತಿನ ಬೌಲಿಂಗ್ ಹಾಗೂ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದ ಸೌರಾಷ್ಟ್ರ ತನ್ನ ಗುರಿಯನ್ನು ಮತ್ತಷ್ಟು ಸುಲಭವಾಗಿಸಿಕೊಂಡಿತು.ಸ್ಪಿನ್ನರ್‌ಗಳಾದ ಜೆ.ಸುಚಿತ್,ಚೊಚ್ಚಲ ಪಂದ್ಯ ಆಡಿದ ಪ್ರವೀಣ್ ದುಬೆ, ಪವನ್ ದೇಶಪಾಂಡೆ ಹಾಗೂ ಶ್ರೇಯಸ್ ಗೋಪಾಲ್ ಪರಿಣಾಮಕಾರಿ ಪ್ರದರ್ಶನ ನೀಡದೇ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಒತ್ತಡ ಹೇರಲು ವಿಫಲರಾದರು.

ನಾಯಕ ಕರುಣ್ ನಾಯರ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಕೆಲವು ಋಣಾತ್ಮಕ ನಿರ್ಧಾರ ಕೈಗೊಂಡರು. ದಿನದ ಹೆಚ್ಚಿನ ಅವಧಿ ನಾಲ್ವರು ಫೀಲ್ಡರ್‌ಗಳನ್ನು ಬೌಂಡರಿ ಲೈನ್ ಬಳಿ ನಿಲ್ಲಿಸಿದರು. ಸ್ಲಿಪ್‌ನಲ್ಲಿ ಓರ್ವ ಫೀಲ್ಡರ್‌ನ್ನು ನಿಲ್ಲಿಸಲಾಗಿತ್ತು. ಪ್ರವಾಸಿ ಕರ್ನಾಟಕ ತಂಡ ಪ್ರಮುಖ ವೇಗಿ ಅಭಿಮನ್ಯು ಮಿಥುನ್‌ಗೆ ವಿಶ್ರಾಂತಿ ನೀಡಿ, ವಿ.ಕೌಶಿಕ್‌ರನ್ನು ಕೈಬಿಟ್ಟು ಹೆಚ್ಚುವರಿ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತು. ಕೆ.ವಿ. ಸಿದ್ದಾರ್ಥ್ ಹಾಗೂ ಪವನ್ ದೇಶಪಾಂಡೆ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿ ಸೊರಗಿರುವ ತಂಡದ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News