ಎಡಪಂಥೀಯ ಕಾರ್ಯಕರ್ತರ ಅತಿರೇಕದ ವರ್ತನೆ ಎಂದ ಶಿಕ್ಷಣ ತಜ್ಞರು, ಪ್ರಧಾನಿಗೆ ಪತ್ರ

Update: 2020-01-12 15:34 GMT

ಹೊಸದಿಲ್ಲಿ,ಜ.12: ದೇಶಾದ್ಯಂತ ವಿವಿ ಕ್ಯಾಂಪಸ್‌ ಗಳಲ್ಲಿನ ಇತ್ತೀಚಿನ ಹಿಂಸಾಚಾರದ ಘಟನೆಗಳ ಕುರಿತು ವಿವಿಗಳ ಕುಲಪತಿಗಳು ಸೇರಿದಂತೆ 200ಕ್ಕೂ ಅಧಿಕ ಶಿಕ್ಷಣ ತಜ್ಞರು ರವಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದು,ವಿವಿ ಕ್ಯಾಂಪಸ್‌ಗಳು ಅನಪೇಕ್ಷಿತ ಚಟುವಟಿಕೆಗಳಿಗಾಗಿ ಬಳಕೆಯಾಗುತ್ತಿರುವ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.

ಜೆಎನ್‌ಯುದಿಂದ ಹಿಡಿದು ಜಾಮಿಯಾದವರೆಗೆ, ಅಲಿಗಡ ಮುಸ್ಲಿಮ್ ವಿವಿಯಿಂದ ಹಿಡಿದು ಜಾಧವಪುರ ವಿವಿವರೆಗೆ ಕ್ಯಾಂಪಸ್‌ಗಳಲ್ಲಿಯ ಇತ್ತೀಚಿನ ಘಟನಾವಳಿಗಳು ‘ಎಡಪಂಥೀಯ ಕಾರ್ಯಕರ್ತರ ಸಣ್ಣ ಕೂಟದಿಂದಾಗಿ ಶೈಕ್ಷಣಿಕ ವಾತಾವರಣ ಕೆಡುತ್ತಿದೆ’ ಎಂಬ ಎಚ್ಚರಿಕೆಯನ್ನು ನೀಡುತ್ತಿವೆ ಎಂದು ಈ ಶಿಕ್ಷಣ ತಜ್ಞರು ಪತ್ರದಲ್ಲಿ ಹೇಳಿದ್ದಾರೆ.

ಎಡಪಂಥೀಯ ರಾಜಕೀಯವು ಹೇರಿರುವ ಸೆನ್ಸಾರ್ಶಿಪ್‌ನಿಂದಾಗಿ ಕ್ಯಾಂಪಸ್‌ಗಳಲ್ಲಿ ಬಹಿರಂಗ ಸಂವಾದಗಳನ್ನು ಏರ್ಪಡಿಸುವುದು ಅಥವಾ ಸ್ವತಂತ್ರವಾಗಿ ಮಾತನಾಡುವುದು ಕಠಿಣವಾಗಿದೆ ಎಂದು ತಿಳಿಸಿರುವ ಪತ್ರವು,ಎಡಪಂಥೀಯ ರಾಜಕೀಯವು ಬಲವಾಗಿರುವ ಕ್ಯಾಂಪಸ್‌ ಗಳಲ್ಲಿ ಮೊಂಡುತನದ ಬೇಡಿಕೆಗಳ ಕುರಿತು ಮುಷ್ಕರಗಳು,ಧರಣಿಗಳು ಮತ್ತು ಬಂದ್‌ಗಳು ಸಾಮಾನ್ಯವಾಗಿವೆ. ಎಡಪಂಥೀಯ ಸಿದ್ಧಾಂತಗಳನ್ನು ಒಪ್ಪಿಕೊಳ್ಳದಿದ್ದರೆ ವ್ಯಕ್ತಿಗತವಾಗಿ ಗುರಿಯಾಗಿಸಿಕೊಳ್ಳುವುದು,ಬಹಿರಂಗವಾಗಿ ಅಪಪ್ರಚಾರ ಮತ್ತು ಕಿರುಕುಳದ ಘಟನೆಗಳು ಹೆಚ್ಚುತ್ತಿವೆ ಎಂದಿದೆ.

ಶೈಕ್ಷಣಿಕ ಸ್ವಾತಂತ್ರ್ಯಕ್ಕಾಗಿ ಕರೆನೀಡಿರುವ ಈ ಶಿಕ್ಷಣ ತಜ್ಞರು,ಪ್ರತಿಭಟನೆಗಳು ಮತ್ತು ಹಿಂಸಾಚಾರದ ಘಟನೆಗಳು ವಿದ್ಯಾರ್ಥಿಗಳನ್ನು ಶಿಕ್ಷಣಾರ್ಥಿಗಳ ಬದಲು ರಾಜಕೀಯ ಕಾರ್ಯಕರ್ತರನ್ನಾಗಿ ಪರಿವರ್ತಿಸುತ್ತಿವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News