2018ರಲ್ಲಿ ಭಾರತದಲ್ಲಿ ಪ್ರತಿದಿನ 109 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಎನ್‌ಸಿಆರ್‌ಬಿ ವರದಿ

Update: 2020-01-12 16:11 GMT

ಹೊಸದಿಲ್ಲಿ,ಜ.12: ಭಾರತದಲ್ಲಿ 2018ರಲ್ಲಿ ಪ್ರತಿದಿನ ಸರಾಸರಿ 109 ಮಕ್ಕಳು ಲೈಂಗಿಕ ದೌರ್ಜನ್ಯಗಳಿಗೆ ಗುರಿಯಾಗಿದ್ದು, 2017ರಲ್ಲಿ ವರದಿಯಾಗಿದ್ದ ಇಂತಹ ಪ್ರಕರಣಗಳಿಗೆ ಹೋಲಿಸಿದರೆ ಶೇ.22ರಷ್ಟು ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಘಟಕ (ಎನ್‌ಸಿಆರ್‌ಬಿ)ವು ಇತ್ತೀಚಿಗೆ ಬಿಡುಗಡೆಗೊಳಿಸಿರುವ ಅಂಕಿಅಂಶಗಳು ತೋರಿಸಿವೆ.

ಪೊಕ್ಸೊ ಕಾಯ್ದೆಯಡಿ 2017ರಲ್ಲಿ 32,608 ಪ್ರಕರಣಗಳು ವರದಿಯಾಗಿದ್ದರೆ,2018ರಲ್ಲಿ ಇವುಗಳ ಸಂಖ್ಯೆ 39,827ಕ್ಕೇರಿದೆ. 2028ರಲ್ಲಿ ಮಕ್ಕಳ ಮೇಲಿನ ಅತ್ಯಾಚಾರದ 21,605 ಪ್ರಕರಣಗಳು ದಾಖಲಾಗಿದ್ದು, ಬಲಿಪಶುಗಳಲ್ಲಿ 21,401 ಬಾಲಕಿಯರು ಮತ್ತು 204 ಬಾಲಕರು ಸೇರಿದ್ದಾರೆ. ಅತ್ಯಧಿಕ ಅತ್ಯಾಚಾರದ ಪ್ರಕರಣಗಳು ಮಹಾರಾಷ್ಟ್ರ(2,832)ದಲ್ಲಿ ದಾಖಲಾಗಿದ್ದರೆ,ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ (2,023) ಮತ್ತು ತಮಿಳುನಾಡು (1,457) ಇವೆ ಎಂದು ಎನ್‌ಸಿಆರ್‌ಬಿ ತನ್ನ ವರದಿಯಲ್ಲಿ ತಿಳಿಸಿದೆ.

ಮಕ್ಕಳ ಮೇಲಿನ ಒಟ್ಟಾರೆ ಅಪರಾಧ ಪ್ರಕರಣಗಳ ಸಂಖ್ಯೆ 2008ರಿಂದ 2018ವರೆಗಿನ ದಶಕದಲ್ಲಿ ಆರು ಪಟ್ಟು ಏರಿಕೆಯಾಗಿದೆ. 2008ರಲ್ಲಿ 22,500ರಷ್ಟಿದ್ದ ಇಂತಹ ಪ್ರಕರಣಗಳ ಸಂಖ್ಯೆ 2018ರಲ್ಲಿ 1,41,764ಕ್ಕೇರಿದೆ. 2017ರಲ್ಲಿ ಇಂತಹ 1,29,032 ಪ್ರಕರಣಗಳು ದಾಖಲಾಗಿದ್ದವು.

2018ರಲ್ಲಿ ಮಕ್ಕಳ ವಿರುದ್ಧದ ಪ್ರಮುಖ ಅಪರಾಧಗಳಲ್ಲಿ ಶೇ.44.2ರಷ್ಟು ಅಪಹರಣ ಪ್ರಕರಣಗಳಾಗಿದ್ದರೆ, ಶೇ.34.7 ಪ್ರಕರಣಗಳು ಪೊಕ್ಸೊ ಕಾಯ್ದೆಗೆ ಸಂಬಂಧಿಸಿದ್ದವು.

2018ರಲ್ಲಿ 67,134 ಮಕ್ಕಳು ನಾಪತ್ತೆಯಾಗಿದ್ದರೆ, ಆ ವರ್ಷ ಒಟ್ಟು 71,176 (ಹಿಂದಿನ ವರ್ಷಗಳ ಪ್ರಕರಣಗಳು ಸೇರಿದಂತೆ) ಮಕ್ಕಳನ್ನು ಪತ್ತೆ ಹಚ್ಚಲಾಗಿತ್ತು. ಪೊರ್ನೊಗ್ರಫಿಗಾಗಿ ಮಕ್ಕಳನ್ನು ಬಳಸಿಕೊಂಡ 781 ಪ್ರಕರಣಗಳು 2018ರಲ್ಲಿ ದಾಖಲಾಗಿದ್ದರೆ,2017ರಲ್ಲಿ ಇಂತಹ 331 ಪ್ರಕರಣಗಳು ವರದಿಯಾಗಿದ್ದವು.

 ದೇಶದಲ್ಲಿ ಮಕ್ಕಳ ವಿರುದ್ಧದ ಅಪರಾಧಗಳ ಒಟ್ಟು ಪ್ರಕರಣಗಳ ಪೈಕಿ ಶೇ.51ರಷ್ಟು ಉತ್ತರ ಪ್ರದೇಶ, ಮಧ್ಯಪ್ರದೇಶ,ಮಹಾರಾಷ್ಟ್ರ,ದಿಲ್ಲಿ ಮತ್ತು ಬಿಹಾರ ಈ ಐದು ರಾಜ್ಯಗಳಲ್ಲಿ ನಡೆದಿವೆ ಎಂದು ಎನ್‌ಸಿಆರ್‌ಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News