ಇರಾನ್‍ ನಲ್ಲಿ ವ್ಯಾಪಕಗೊಂಡ ಸರಕಾರ ವಿರೋಧಿ ಪ್ರತಿಭಟನೆ: ಬೀದಿಗಿಳಿದ ಜನರು

Update: 2020-01-13 15:16 GMT

ಟೆಹರಾನ್, ಜ. 13: ಯುಕ್ರೇನ್ ಏರ್‌ಲೈನ್ಸ್‌ಗೆ ಸೇರಿದ ನಾಗರಿಕ ವಿಮಾನವೊಂದನ್ನು ಇರಾನ್ ಸೇನೆಯು ಹೊಡೆದುರುಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಜನರ ಮೇಲೆ ಪೊಲೀಸರು ಗುಂಡು ಹಾರಿಸಿಲ್ಲ ಎಂದು ಇರಾನ್ ಪೊಲೀಸರು ಸೋಮವಾರ ಹೇಳಿದ್ದಾರೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವೀಡಿಯೊವೊಂದು ಗುಂಡು ಹಾರಾಟದ ಸದ್ದು ಮತ್ತು ರಕ್ತದ ಮಡುಗಳನ್ನು ದಾಖಲಿಸಿದೆ.

 ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವಂತೆಯೇ, ತಪ್ಪು ಗ್ರಹಿಕೆಯಿಂದ ನಾಗರಿಕ ವಿಮಾನವನ್ನು ಇರಾನ್ ಸೈನಿಕರು ಉರುಳಿಸಿರುವುದನ್ನು ವಿರೋಧಿಸಿ ಇರಾನ್‌ನಲ್ಲಿ ಪ್ರತಿಭಟನೆಯೂ ನಡೆಯುತ್ತಿದೆ. 1979ರ ಇರಾನ್ ಕ್ರಾಂತಿಯ ಬಳಿಕ, ಮೊದಲ ಬಾರಿಗೆ ಇರಾನ್ ಮತ್ತು ಅಮೆರಿಕಗಳ ನಡುವೆ ಅತ್ಯಂತ ಅಸ್ಥಿರ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.

  ಯುಕ್ರೇನ್‌ನ ನಾಗರಿಕ ವಿಮಾನವನ್ನು ಬುಧವಾರ ತಪ್ಪು ಗ್ರಹಿಕೆಯಿಂದ ಉರುಳಿಸಿರುವುದನ್ನು ಇರಾನ್ ಒಪ್ಪಿಕೊಂಡಿದೆ. ವಿಮಾನದಲ್ಲಿದ್ದ ಎಲ್ಲ 176 ಮಂದಿ ಮೃತಪಟ್ಟಿದ್ದಾರೆ. ಆರಂಭದ ಕೆಲವು ದಿನಗಳಲ್ಲಿ ಇದನ್ನು ಮುಚ್ಚಿಡಲು ಯತ್ನಿಸಿದ ಇರಾನ್, ಹೊಡೆದುರುಳಿಸಿರುವುದಕ್ಕೆ ಪುರಾವೆಗಳು ಹೊರಬರುತ್ತಿದ್ದಂತೆಯೇ ಇನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಅರಿತು ಶನಿವಾರ ತನ್ನ ತಪ್ಪನ್ನು ಒಪ್ಪಿಕೊಂಡಿತು.

ಸ್ಫೋಟಗೊಂಡ ಜನರ ಆಕ್ರೋಶ

ಪ್ರಯಾಣಿಕ ವಿಮಾನವನ್ನು ಹೊಡೆದುರುಳಿಸಿರುವ ವಿಷಯಕ್ಕೆ ಸಂಬಂಧಿಸಿ, ಇರಾನ್ ಕೃತ್ಯದ ಬಗ್ಗೆ ಆರಂಭದಲ್ಲಿ ಒಳಗೊಳಗೇ ಕುದಿಯುತ್ತಿದ್ದ ಇರಾನ್ ಜನರ ಆಕ್ರೋಶ, ಅದು ಕೃತ್ಯವನ್ನು ಒಪ್ಪಿಕೊಂಡ ಬಳಿಕ ಸ್ಫೋಟಗೊಂಡಿತು ಹಾಗೂ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಜನರು ರವಿವಾರವೂ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗಳು ನಡೆದ ಟೆಹರಾನ್‌ನ ಆಝಾದಿ ಚೌಕದ ಆಸುಪಾಸಿನಲ್ಲಿ ನಡೆಯಿತೆನ್ನಲಾದ ಗುಂಡು ಹಾರಾಟದ ಶಬ್ದವನ್ನು ಒಳಗೊಂಡ ವೀಡಿಯೊಗಳು ರವಿವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡವು. ನೆಲದಲ್ಲಿ ನೆತ್ತರು ಹರಿದಿರುವುದು, ಗಾಯಾಳುಗಳನ್ನು ಎತ್ತಿಕೊಂಡು ಹೋಗುವುದು ಹಾಗೂ ಭದ್ರತಾ ಸಿಬ್ಬಂದಿಯಂತೆ ಕಾಣುವ ಜನರು ರೈಫಲ್‌ಗಳೊಂದಿಗೆ ಓಡುವುದು ವೀಡಿಯೊದಲ್ಲಿ ದಾಖಲಾಗಿದೆ. ಪೊಲೀಸರು ಪ್ರತಿಭಟನಕಾರರನ್ನು ಲಾಠಿಯಿಂದ ಹೊಡೆಯುವುದು ಹಾಗೂ ಇತರರು ‘ಅವರನ್ನು ಹೊಡೆಯಬೇಡಿ’ ಎಂದು ಹೇಳುವುದು ಇತರ ವೀಡಿಯೊಗಳಲ್ಲಿ ಕಾಣುತ್ತದೆ.

 ನವೆಂಬರ್ ತಿಂಗಳಲ್ಲಿ ಬೆಲೆಯೇರಿಕೆ ವಿರುದ್ಧ ಇರಾನ್‌ನಾದ್ಯಂತ ಜನರು ನಡೆಸಿದ ಪ್ರತಿಭಟನೆಗಳ ವೇಳೆ, ಪೊಲೀಸರು ನೂರಾರು ಪ್ರತಿಭಟನಕಾರರನ್ನು ಕೊಂದಿದ್ದರು ಎನ್ನಲಾಗಿದೆ.

ಪೊಲೀಸರ ನಿರಾಕರಣೆ

‘‘ಪ್ರತಿಭಟನೆಗಳ ವೇಳೆ ಪೊಲೀಸರು ಖಂಡಿತವಾಗಿಯೂ ಗುಂಡು ಹಾರಿಸಿಲ್ಲ. ಯಾಕೆಂದರೆ, ಸಂಯಮವನ್ನು ಪ್ರದರ್ಶಿಸುವಂತೆ ಟೆಹರಾನ್ ಪೊಲೀಸರಿಗೆ ಆದೇಶ ನೀಡಲಾಗಿತ್ತು’’ ಎಂದು ಟೆಹರಾನ್ ಪೊಲೀಸ್ ಮುಖ್ಯಸ್ಥ ಹುಸೈನ್ ರಹೀಮಿ ಸರಕಾರಿ ಟಿವಿಯ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ಹೇಳಿಕೆಯೊಂದರಲ್ಲಿ ತಿಳಿಸಿದರು.

ಪ್ರತಿಭಟನಕಾರರನ್ನು ಕೊಲ್ಲಬೇಡಿ, ಜಗತ್ತು ಗಮನಿಸುತ್ತಿದೆ: ಟ್ರಂಪ್

 ನಾಗರಿಕ ವಿಮಾನವನ್ನು ಹೊಡೆದುರುಳಿಸಿರುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಾಗವಹಿಸುವವರನ್ನು ಕೊಲ್ಲಬೇಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಸರಕಾರಕ್ಕೆ ರವಿವಾರ ಎಚ್ಚರಿಕೆ ನೀಡಿದ್ದಾರೆ.

‘‘ಇರಾನ್‌ನ ನಾಯಕರಿಗೆ ನಾನು ಹೇಳುತ್ತಿರುವುದೇನೆಂದರೆ, ನಿಮ್ಮ ಪ್ರತಿಭಟನಕಾರರನ್ನು ಕೊಲ್ಲಬೇಡಿ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ. ‘‘ಜಗತ್ತು ಹಾಗೂ ಮುಖ್ಯವಾಗಿ ಅಮೆರಿಕ ಇದನ್ನು ಗಮನಿಸುತ್ತಿದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News