ನಮ್ಮ ಸರಕಾರ ಪ್ರತಿಭಟನಕಾರರನ್ನು ನಾಯಿಗಳನ್ನು ಕೊಂದಂತೆ ಕೊಂದಿದೆ: ಬಿಜೆಪಿನಾಯಕ ಘೋಷ್

Update: 2020-01-13 14:24 GMT

ಕೋಲ್ಕತ್ತಾ, ಜ. 13: ಸಾರ್ವಜನಿಕ ಸೊತ್ತುಗಳಿಗೆ ಹಾನಿ ಉಂಟು ಮಾಡುವವರನ್ನು ನಾಯಿಗಳಂತೆ ಗುಂಡು ಹಾರಿಸಿ ಕೊಲ್ಲಲಾಗುವುದು ಎಂದು ಬಿಜೆಪಿಯ ಪಶ್ಚಿಮಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ನೀಡಿದ ಹೇಳಿಕೆ ವಿವಾದ ಕಿಡಿ ಹೊತ್ತಿಸಿದೆ.

 ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಡೆದ ರ್ಯಾಲಿ ನೇತೃತ್ವ ವಹಿಸಿದ ಬಳಿಕ ನೋಯ್ಡಾ ಜಿಲ್ಲೆಯ ರಾಣಾಘಾಟ್‌ನಲ್ಲಿ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಘೋಷ್ ಈ ಹೇಳಿಕೆ ನೀಡಿದ್ದಾರೆ. “ಅವರು ರೈಲುಗಳು ಹಾಗೂ ಬಸ್‌ಗಳಿಗೆ ಬೆಂಕಿ ಹಚ್ಚಿದರು. ಪಶ್ಚಿಮಬಂಗಾಳದಲ್ಲಿ 500 ಕೋಟಿ ರೂಪಾಯಿಯಿಂದ 600 ಕೋಟಿ ರೂಪಾಯಿ ವರೆಗೆ ಸೊತ್ತುಗಳಿಗೆ ಹಾನಿ ಉಂಟು ಮಾಡಿದರು. ಆದರೆ, ಪೊಲೀಸರು ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್ ನಡೆಸಲಿಲ್ಲ ಅಥವಾ ಎಫ್‌ಐಆರ್ ದಾಖಲಿಸಲಿಲ್ಲ. ದೀದಿಯವರ ಪೊಲೀಸ್ ಯಾರನ್ನೂ ಬಂಧಿಸಲಿಲ್ಲ. ಯಾಕೆ ? ಇದು ಸಾರ್ವಜನಿಕ ಹಣದ ವ್ಯರ್ಥ್ಯ. ಇದು ನಿಮ್ಮ ಹಣ ಹಾಗೂ ನನ್ನ ಹಣ ಎಂದು ಅವರು ಹೇಳಿದ್ದಾರೆ. ನೀವು ಅಸ್ಸಾಂ, ಉತ್ತರಪ್ರದೇಶ, ಹಾಗೂ ಕರ್ನಾಟಕದತ್ತ ನೋಡಿ. ಅಲ್ಲಿ ನಮ್ಮ ಸರಕಾರ ಸಾರ್ವಜನಿಕ ಸೊತ್ತುಗಳಿಗೆ ಹಾನಿ ಉಂಟು ಮಾಡಿದ ದೆವ್ವಗಳನ್ನು ಗುಂಡು ಹಾರಿಸಿ ಕೊಂದಿದೆ. ಅವರನ್ನು ನಾಯಿಗಳನ್ನು ಕೊಂದಂತೆ ಕೊಂದಿದೆ” ಎಂದು ಅವರು ಹೇಳಿದ್ದಾರೆ. “ನಿಮ್ಮಂತಹ ಜನರು ಇಲ್ಲಿಗೆ ಬರುತ್ತೀರಿ. ನಮ್ಮ ಅನ್ನದ ಭಾಗವನ್ನು ಪಡೆಯುತ್ತೀರಿ. ಅನಂತರ ಇಲ್ಲಿನ ಸೊತ್ತುಗಳಿಗೆ ಹಾನಿ ಮಾಡುತ್ತೀರಿ. ನಾವು ಲಾಠಿ ಚಾರ್ಜ್ ನಡೆಸುತ್ತೇವೆ. ಗುಂಡು ಹಾರಿಸುತ್ತೇವೆ. ನಿಮ್ಮ ಬರುಡೆಯನ್ನು ಪುಡಿಗಟ್ಟುತ್ತೇವೆ. ಮಮತಾ ಬ್ಯಾನರ್ಜಿಗೆ ಈ ಧೈರ್ಯ ಇಲ್ಲ” ಎಂದು ಅವರು ಹೇಳಿದ್ದಾರೆ.

ಅವರ ಈ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆ ಕುರಿತಂತೆ ಟಿಎಂಸಿ ಹಾಗೂ ಕಾಂಗ್ರೆಸ್ ಘೋಷ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ದಿಲೀಪ್ ಘೋಷ್ ಅವರಿಗೆ ಹುಚ್ಚು. ಅವರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯ ಇದೆ ಎಂದು ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಶಿಕ್ಷಣ ಸಚಿವ ಪಾರ್ಥಾ ಚಟರ್ಜಿ ಹೇಳಿದ್ದಾರೆ.

ಬೇಜವಾಬ್ದಾರಿಯುತ ಹೇಳಿಕೆ: ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ

 ಹೊಸದಿಲ್ಲಿ: ತನ್ನ ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲಿ ಸಾರ್ವಜನಿಕ ಸೊತ್ತುಗಳಿಗೆ ಹಾನಿ ಉಂಟು ಮಾಡಿದವರನ್ನು ನಾಯಿಗಳಂತೆ ಕೊಲ್ಲಲಾಗಿದೆ ಎಂಬ ಬಿಜೆಪಿಯ ಪಶ್ಚಿಮಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರ ಹೇಳಿಕೆಯನ್ನು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಖಂಡಿಸಿದ್ದಾರೆ. ಒಂದು ಪಕ್ಷವಾಗಿರುವ ಬಿಜೆಪಿಗೂ ದಿಲೀಪ್ ಘೋಷ್ ಅವರ ಹೇಳಿಕೆಗೂ ಯಾವುದೇ ಸಂಬಂಧ ಇಲ್ಲ. ಅದು ಅವರ ಕಲ್ಪನೆ ಅಷ್ಟೇ. ಉತ್ತರಪ್ರದೇಶ, ಅಸ್ಸಾಂನಲ್ಲಿ ಇರುವ ಬಿಜೆಪಿ ಸರಕಾರ ಯಾವುದೇ ಕಾರಣಕ್ಕೂ ಜನರ ಮೇಲೆ ಗುಂಡು ಹಾರಿಸಲು ಉದ್ದೇಶಿಸಿರಲಿಲ್ಲ. ದಿಲೀಪ್ ಘೋಷ್ ಅವರದ್ದು ಬೇಜವಾಬ್ದಾರಿಯುತ ಹೇಳಿಕೆ ಎಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆ ಸಚಿವ ಬಾಬುಲ್ ಸುಪ್ರಿಯೊ ಸೋಮವಾರ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News