ಉತ್ತರಪ್ರದೇಶದಲ್ಲಿ ಸಿಎಎ ಅನುಷ್ಠಾನ ಪ್ರಕ್ರಿಯೆ ಆರಂಭ: 32,000 ವಲಸಿಗರ ಪತ್ತೆ
ಹೊಸದಿಲ್ಲಿ, ಜ. 13: ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಅಗತ್ಯ ಇರುವವರಿಗೆ ಪೌರತ್ವ ನೀಡಲು ಜನರನ್ನು ಗುರುತಿಸುವ ಪ್ರಕ್ರಿಯೆಯನ್ನು ಉತ್ತರಪ್ರದೇಶ ಸರಕಾರ ಈಗಾಗಲೇ ಆರಂಭಿಸಿದೆ. ಇದರಿಂದ ರಾಜ್ಯದ 21 ಜಿಲ್ಲೆಗಳಲ್ಲಿ ಈಗಾಗಲೇ 32 ಸಾವಿರ ನಿರಾಶ್ರಿತರನ್ನು ಗುರುತಿಸಲಾಗಿದೆ ಎಂದು ಸರಕಾರ ಹೇಳಿದೆ.
ಆದರೆ, ಹೀಗೆ ಜನರನ್ನು ಗುರುತಿಸಲು ಯಾವ ಮಾನದಂಡಗಳನ್ನು ಅನುಸರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಮೂರು ದಿನಗಳ ಹಿಂದೆ ಗಝೆಟ್ ಅಧಿಸೂಚನೆ ಮೂಲಕ ಅಸ್ತಿತ್ವಕ್ಕೆ ಬಂದಿದೆ. ಆದರೆ, ಅನುಷ್ಠಾನಗೊಳಿಸಲು ನಿಯಮಗಳನ್ನು ಇದುವರೆಗೆ ರೂಪಿಸಿಲ್ಲ. ‘‘ನಾವು ಈ ಮೂಲಕ ಆತುರಪಡುತ್ತಿಲ್ಲ. ಕೇವಲ ಆರಂಭಿಸಿದ್ದೇವೆ. ಒಂದು ಬಾರಿ ಕಾಯ್ದೆ ಬಗ್ಗೆ ಅಧಿಸೂಚನೆ ಹೊರಡಿಸಿದ ಬಳಿಕ, ನಾವು ಮುಂದುವರಿಯುವ ಅಗತ್ಯ ಇದೆ’’ ಎಂದು ಉತ್ತರಪ್ರದೇಶ ಸರಕಾರದ ಸಚಿವ ಹಾಗೂ ಸರಕಾರದ ವಕ್ತಾರ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ.
‘‘ಇದು ಮುಂದುವರಿಯುವ ಪ್ರಕ್ರಿಯೆ, ಅಂಕಿ-ಅಂಶಗಳನ್ನು ನವೀಕರಿಸುತ್ತಲೇ ಇರಬೇಕು. ಸಮೀಕ್ಷೆ ನಡೆಸುವಂತೆ ಹಾಗೂ ನವೀಕೃತ ಪಟ್ಟಿ ಇರಿಸಿಕೊಳ್ಳುವಂತೆ ಜಿಲ್ಲಾ ದಂಡಾಧಿಕಾರಿಗಳು ಸೂಚಿಸಿದ್ದಾರೆ. ಕೇಂದ್ರ ಸರಕಾರದೊಂದಿಗೆ ಕೂಡ ಈ ಪಟ್ಟಿಯನ್ನು ಹಂಚಿಕೊಳ್ಳುವ ಪ್ರಕ್ರಿಯೆಯಲ್ಲಿ ನಾವು ತೊಡಗಿಕೊಂಡಿದ್ದೇವೆ’’ ಎಂದು ಸಚಿವರು ಹೇಳಿದ್ದಾರೆ. ಆರಂಭಿಕ ಸಮೀಕ್ಷೆಯ ಒಂದು ಭಾಗವಾಗಿ ಬಾಂಗ್ಲಾದೇಶ ಹಾಗೂ ಪೂರ್ವ ಪಾಕಿಸ್ತಾನದಿಂದ ಬಂದ 32,000 ನಿರಾಶ್ರಿತರನ್ನು ಗುರುತಿಸಲಾಗಿದೆ ಹಾಗೂ ಅವರ ಹೆಸರನ್ನು ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲೆಯ ಉನ್ನತ ಸರಕಾರಿ ಅಧಿಕಾರಿ ವೈಭವ್ ಶ್ರೀವಾತ್ಸವ ತಿಳಿಸಿದ್ದಾರೆ.
ತಮ್ಮ ದೇಶಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಇವರು ಆರಂಭದಲ್ಲಿ ಪಿಲಿಬಿಟ್‌ಗೆ ಆಗಮಿಸಿದ್ದರು ಎಂಬುದನ್ನು ಪ್ರಾಥಮಿಕ ತನಿಖೆ ಬಹಿರಂಗಗೊಳಿಸಿದೆ ಎಂದು ಅವರು ಹೇಳಿದ್ದಾರೆ.