‘ಬಿಜೆಪಿ ಸಂಸದ ಸನ್ನಿ ಡಿಯೋಲ್ ನಾಪತ್ತೆ !’

Update: 2020-01-13 14:31 GMT

ಅಮೃತಸರ, ಜ.13: ಬಿಜೆಪಿಯ ಸಂಸದ ಸನ್ನಿ ಡಿಯೋಲ್ ಕ್ಷೇತ್ರದ ಜನತೆಯ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಸದರು ನಾಪತ್ತೆಯಾಗಿದ್ದು ಅವರ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪಠಾಣ್‌ಕೋಟ್‌ನ ಹಲವೆಡೆ ಭಿತ್ತಿಪತ್ರ ಅಂಟಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಸಂಸತ್ ಪ್ರವೇಶಿಸಿದ್ದ ಸನ್ನಿ ಡಿಯೋಲ್ ತಾನು ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದು ತನ್ನ ಅನುಪಸ್ಥಿತಿಯಲ್ಲಿ ಅಭಿವೃದ್ಧಿ ಕಾರ್ಯ ಸುಗಮವಾಗಿ ಸಾಗಬೇಕೆಂಬ ಉದ್ದೇಶದಿಂದ ಕ್ಷೇತ್ರದಲ್ಲಿ ಆಪ್ತ ಸಹಾಯಕನನ್ನು ನೇಮಿಸುವುದಾಗಿ ಘೋಷಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಗೆದ್ದ ಬಳಿಕ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸಲು ಸನ್ನಿ ಡಿಯೋಲ್ ಲಭ್ಯವಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ ಅಧಿವೇಶನದಲ್ಲೂ ಸನ್ನಿ ಡಿಯೋಲ್ ಅವರ ಉಪಸ್ಥಿತಿ ಕಡಿಮೆಯಾಗಿದ್ದು ಕೇವಲ 9 ದಿನದ ಕಲಾಪಕ್ಕೆ ಮಾತ್ರ ಹಾಜರಾಗಿದ್ದು 28 ಕಲಾಪಕ್ಕೆ ಗೈರುಹಾಜರಾಗಿದ್ದರು. ಇದೀಗ ಪಠಾಣ್‌ಕೋಟ್ ರೈಲು ನಿಲ್ದಾಣ ಸಹಿತ ಹಲವೆಡೆ ‘ಸನ್ನಿ ಡಿಯೋಲ್ ನಾಪತ್ತೆ’ ಎಂಬ ಪೋಸ್ಟರ್ ಹಚ್ಚಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸನ್ನಿ ಡಿಯೋಲ್, “ನನ್ನ ವಿರೋಧಿಗಳು ನನ್ನ ಹೆಸರು ಕೆಡಿಸಲು ಇಲ್ಲಸಲ್ಲದ ಆರೋಪ ಮಾಡುತ್ತಿರುವ ಮಾಹಿತಿ ದೊರಕಿದೆ. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ನನ್ನ ಬದ್ಧತೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News