ಮುಸುಕುಧಾರಿ ಮಹಿಳೆ ದಿಲ್ಲಿ ವಿವಿ ವಿದ್ಯಾರ್ಥಿನಿ: ಪೊಲೀಸರು

Update: 2020-01-13 14:38 GMT

ಹೊಸದಿಲ್ಲಿ, ಜ. 13: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ ನಲ್ಲಿ ನಡೆದ ಹಿಂಸಾಚಾರದ ಕುರಿತ ವೈರಲ್ ವೀಡಿಯೊದಲ್ಲಿ ಮುಸುಕುಧಾರಿ ಮಹಿಳೆಯನ್ನು ಇಂಡಿಯಾ ಟುಡೆ ಟಿವಿಯ ಛದ್ಮ ಕಾರ್ಯಾಚರಣೆ ಬಹಿರಂಗಗೊಳಿಸಿದ ಬಳಿಕ, ದಿಲ್ಲಿ ಪೊಲೀಸರ ಸಿಟ್ ಆ ಮಹಿಳೆಯನ್ನು ಗುರುತಿಸಿದೆ.

ಹಿಂಸಾಚಾರದ ವೀಡಿಯೊದಲ್ಲಿ ಕಂಡು ಬಂದ ಮಹಿಳೆ ಚೌಕುಳಿ ಅಂಗಿ, ನಸು ನೀಲಿ ತಲೆವಸ್ತ್ರ ಧರಿಸಿದ್ದಳು ಹಾಗೂ ಕೈಯಲ್ಲಿ ದೊಣ್ಣೆ ಹಿಡಿದುಕೊಂಡಿದ್ದಳು. ಈಕೆಯನ್ನು ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಆಕೆಯ ಹೆಸರನ್ನು ಇದುವರೆಗೆ ಬಹಿರಂಗಪಡಿಸಿಲ್ಲ.

ಜೆಎನ್‌ಯು ಹಿಂಸಾಚಾರದ ಕುರಿತು ದಿಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಪಾಲ್ಗೊಳ್ಳಲು ಈ ಮಹಿಳೆಗೆ ನೋಟಿಸು ರವಾನಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ‘‘ದಿಲ್ಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ ನಲ್ಲಿ ನಡೆದ ಹಿಂಸಾಚಾರದ ವೀಡಿಯೊದಲ್ಲಿ ಕಂಡು ಬಂದ ಮುಸುಕುಧಾರಿ ಮಹಿಳೆಯನ್ನು ಸಿಟ್ ಗುರುತಿಸಿದೆ. ತನಿಖೆಯಲ್ಲಿ ಭಾಗಿಯಾಗುವಂತೆ ಆಕೆಗೆ ಕೂಡಲೇ ನೋಟಿಸು ಜಾರಿ ಮಾಡಲಾಗುವುದು’’ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News