ಜೆಎನ್‌ಯು ಹಿಂಸಾಚಾರದ ಸಾಕ್ಷ್ಯಗಳನ್ನು ಸಂರಕ್ಷಿಸಿ: ವಾಟ್ಸ್ ಆ್ಯಪ್, ಗೂಗಲ್‌ಗೆ ದಿಲ್ಲಿ ಹೈಕೋರ್ಟ್ ಸೂಚನೆ

Update: 2020-01-13 14:50 GMT

ಹೊಸದಿಲ್ಲಿ, ಜ. 13: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್ ‌ನಲ್ಲಿ ಜನವರಿ 5ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ದತ್ತಾಂಶ, ಸಿಸಿಟಿವಿ ದೃಶ್ಯಾವಳಿ ಹಾಗೂ ಇತರ ಪುರಾವೆಗಳನ್ನು ಸಂರಕ್ಷಿಸುವ ಕುರಿತು ಜೆಎನ್‌ಯುನ ಮೂವರು ಅಧ್ಯಾಪಕರು ಸಲ್ಲಿಸಿದ ಮನವಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ದಿಲ್ಲಿ ಸರಕಾರದ ನಗರ ಪೊಲೀಸ್, ವಾಟ್ಸ್ ಆ್ಯಪ್ ಇಂಕ್, ಗೂಗ್ಲ್ ಇಂಕ್ ಹಾಗೂ ಆ್ಯಪಲ್ ಇಂಕ್‌ಗೆ ಸೂಚಿಸಿದೆ.

ಹಿಂಸಾಚಾರದ ಕುರಿತ ಸಿಸಿಟಿವಿ ದ್ಯಶ್ಯಾವಳಿಗಳನ್ನು ಸಂರಕ್ಷಿಸಿ ಇರಿಸುವಂತೆ ಹಾಗೂ ಹಸ್ತಾಂತರಿಸುವಂತೆ ಜೆಎನ್‌ಯು ಆಡಳಿತಕ್ಕೆ ತಿಳಿಸಲಾಗಿದೆ ಎಂದು ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ಈ ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದಾರೆ. ಜೆಎನ್‌ಯು ವಿಶ್ವವಿದ್ಯಾನಿಲಯದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆಯನ್ನು ಪೊಲೀಸರು ಸ್ವೀಕರಿಸಿಲ್ಲ ಎಂದು ದಿಲ್ಲಿ ಸರಕಾರದ ಸ್ಥಾಯಿ ಮಂಡಳಿ (ಕ್ರಿಮಿನಲ್) ಯ ರಾಹುಲ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಜೆಎನ್‌ಯು ಹಿಂಸಾಚಾರಕ್ಕೆ ಸಂಬಂಧಿಸಿ ಸಂದೇಶ, ಚಿತ್ರಗಳು, ವೀಡಿಯೊ ಹಾಗೂ ಸದಸ್ಯರ ದೂರಾವಣಿ ಸಂಖ್ಯೆ ಸಹಿತ ‘‘ಯುನಿಟಿ ಎಗೈನ್ಸ್ಟ್ ಲೆಫ್ಟ್’’ ಹಾಗೂ ‘‘ಫ್ರೆಂಡ್ಸ್ ಆಫ್ ಆರ್‌ಎಸ್‌ಎಸ್’’ ಎಂಬ ಎರಡು ಗುಂಪಿನ ದತ್ತಾಂಶಗಳನ್ನು ಸಂರಕ್ಷಿಸಿ ಇರಿಸುವಂತೆ ಪೊಲೀಸರು ವಾಟ್ಸ್ ಆ್ಯಪ್‌ಗೆ ಪತ್ರ ಬರೆದಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ದಿಲ್ಲಿ ಪೊಲೀಸ್ ಆಯುಕ್ತ ಹಾಗೂ ದಿಲ್ಲಿ ಸರಕಾರಕ್ಕೆ ಅಗತ್ಯ ಇರುವ ನಿರ್ದೇಶನಗಳನ್ನು ನೀಡುವಂತೆ ಕೋರಿ ಜೆಎನ್‌ಯು ಅಧ್ಯಾಪಕರಾದ ಅಮಿತ್ ಪರಮೇಶ್ವರನ್, ಅತುಲ್ ಸೂದ್ ಹಾಗೂ ಶುಕ್ಲಾ ವಿನಾಯಕ ಸಾವಂತ್ ಅವರು ಮನವಿ ಸಲ್ಲಿಸಿದ್ದರು. ಜೆಎನ್‌ಯು ಕ್ಯಾಂಪಸ್‌ನ ಎಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲು ಕೂಡ ದಿಲ್ಲಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೂಡ ಮನವಿಯಲ್ಲಿ ಸೂಚಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News