ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ: ಜ. 17ಕ್ಕೆ ಹಿರಿಯ ವಕೀಲರ ಸಭೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ

Update: 2020-01-13 16:28 GMT

ಹೊಸದಿಲ್ಲಿ, ಜ. 30: ಶಬರಿಮಲೆ ದೇವಾಲಯ ಪ್ರಕರಣದ ಮನವಿಗಳ ಗುಚ್ಚವನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವ 9 ಸದಸ್ಯರ ಸಾಂವಿಧಾನಿಕ ಪೀಠ, ತಾನು ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸುವುದಿಲ್ಲ. ಆದರೆ, ಈ ಹಿಂದಿನ ಐವರು ಸದಸ್ಯರ ನ್ಯಾಯಪೀಠ ಎತ್ತಿದ 7 ಪ್ರಶ್ನೆಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದೆ.

ಕೇರಳದ ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡುವ ಸುಪ್ರೀಂ ಕೋರ್ಟ್ ಈ ಹಿಂದಿನ ತೀರ್ಪಿನ ಕುರಿತು ಮರು ಪರಿಶೀಲನಾ ಅರ್ಜಿಗಳ ಗುಚ್ಚವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.

ಶಬರಿಮಲೆ ದೇವಾಲಯ ಹಾಗೂ ಇತರ ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ವಿವಾದಗಳ ಕುರಿತು ಎಲ್ಲ ವಕೀಲರು ಒಟ್ಟಾಗಿ ಕುಳಿತು ಒಂದು ತೀರ್ಮಾನಕ್ಕೆ ಬರಲು ಎಲ್ಲ ಕಕ್ಷಿದಾರರಿಗೆ ಮೂರು ವಾರಗಳ ಕಾಲಾವಕಾಶವನ್ನು ಪೀಠ ನೀಡಿತು. ಈ ವಿಷಯದ ಕುರಿತು ಚರ್ಚಿಸಲು ಜನವರಿ 17ರಂದು ಎಲ್ಲ ವಕೀಲರ ಸಭೆ ಆಯೋಜಿಸುವಂತೆ ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಲಯ ಇದೇ ಸಂದರ್ಭ ಆದೇಶಿಸಿತು.

ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶ ನಿಷೇಧಿಸುವ ಧಾರ್ಮಿಕ ಆಚರಣೆಯ ಸಾಂವಿಧಾನಿಕ ಅಂಶಗಳನ್ನು ಪರಿಶೀಲಿಸಿ ನ್ಯಾಯಾಲಯ ಧಾರ್ಮಿಕ ವಿಷಯಗಳ ಮಧ್ಯೆ ಎಷ್ಟರಮಟ್ಟಿಗೆ ಹಸ್ತಕ್ಷೇಪ ಮಾಡಬಹುದು ಎಂಬ ಬಗ್ಗೆ ಪೀಠ ಪ್ರಾಥಮಿಕವಾಗಿ ನಿರ್ಧರಿಸಲಿದೆ. 9 ನ್ಯಾಯಾಧೀಶರ ಪೀಠ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರೊಂದಿಗೆ ನ್ಯಾಮೂರ್ತಿಗಳಾದ ಆರ್. ಭಾನುಮತಿ, ಅಶೋಕ್ ಭೂಷಣ್, ಎಲ್. ನಾಗೇಶ್ವರ ರಾವ್, ಎಂ. ಶಾಂತನಗೌಡರ್, ಎಸ್. ಅಬ್ದುಲ್ ನಝೀರ್, ಆರ್.ಎಸ್. ರಾಯ್ ದಿ, ಬಿ.ಆರ್. ಗವಾಯಿ ಹಾಗೂ ಸೂರ್ಯ ಕಾಂತ್ ಒಳಗೊಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News