×
Ad

ಹೆಚ್ಚುವರಿ ಶುಲ್ಕ ಪಾವತಿಗೆ ಒತ್ತಡ: ಜೆಎನ್‌ಯು ವಿದ್ಯಾರ್ಥಿಗಳ ಆರೋಪ

Update: 2020-01-13 22:22 IST

ಹೊಸದಿಲ್ಲಿ, ಜ.13: ಚಳಿಗಾಲದ ಸೆಮಿಸ್ಟರ್‌ಗೆ ನೋಂದಣಿ ಮಾಡಿಕೊಳ್ಳುವ ಸಂದರ್ಭ ಹೆಚ್ಚುವರಿ ಶುಲ್ಕ ಪಾವತಿಸುವಂತೆ ವಿವಿಯ ಆಡಳಿತ ವರ್ಗದವರು ಬಲವಂತ ಮಾಡುತ್ತಿದ್ದಾರೆ ಎಂದು ಜೆಎನ್‌ಯು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಶುಲ್ಕ ಹೆಚ್ಚಳದ ವಿರುದ್ಧ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ ಬಳಿಕ ಕಳೆದ ನವೆಂಬರ್‌ನಲ್ಲಿ ವಿವಿಯ ಆಡಳಿತ ಶುಲ್ಕದಲ್ಲಿ ಕಡಿತ ಮಾಡಿರುವುದಾಗಿ ಘೋಷಿಸಿತ್ತು. ಆದರೆ ಈ ಘೋಷಣೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ಈ ಹಿಂದಿನ ಮೊತ್ತವನ್ನೇ ಪಾವತಿಸಲು ಮುಂದಾಗಿದ್ದಾರೆ. ಆದರೆ ಹೆಚ್ಚುವರಿ ಶುಲ್ಕ ಪಾವತಿಸುವಂತೆ ವಿವಿ ಆಡಳಿತ ವರ್ಗ ಒತ್ತಡ ಹೇರುತ್ತಿದೆ ಎಂದು ವಿದ್ಯಾರ್ಥಿಗಳು ಟ್ವೀಟ್ ಮಾಡಿದ್ದಾರೆ.

ಅಲ್ಲದೆ, ಶುಲ್ಕ ಹೆಚ್ಚಳದ ಬಗ್ಗೆ ವಿಚಾರಣೆ ಕೋರಿದ ಅರ್ಜಿಗಳಿಗೆ ಉತ್ತರಿಸುವ ಮೊದಲೇ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಅಮಾನತುಗೊಳಿಸಲಾಗಿದೆ. ಇದು ಸದ್ಭಾವನೆ ಸಂಕೇತದ ಸ್ಪಷ್ಟ ಕಡೆಗಣನೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚುವರಿ ಶುಲ್ಕ ಪಾವತಿಸುವುದಿಲ್ಲ. ಈ ಧೂರ್ತ ಕುಲಪತಿ ವಜಾಗೊಳ್ಳುವವರೆಗೆ ನಾವು ಯಾವುದೇ ರಾಜಿಗೆ ಒಪ್ಪುವುದಿಲ್ಲ ಎಂದು ವಿದ್ಯಾರ್ಥಿಗಳು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಜೆಎನ್‌ಯುವಿನಲ್ಲಿ ನಡೆದ ಹಿಂಸಾಚಾರ ಘಟನೆಯ ಬಳಿಕ ಕುಲಪತಿಯನ್ನು ವಜಾಗೊಳಿಸಬೇಕೆಂಬ ಆಗ್ರಹ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವಾರ ಕೇಂದ್ರ ಸಚಿವಾಲಯದ ಅಧಿಕಾರಿಗಳು ವಿವಿ ಕುಲಪತಿ ಜಗದೀಶ್ ಕುಮಾರ್‌ರೊಂದಿಗೆ ಸಭೆ ನಡೆಸಿದ್ದರು. ಸಭೆಯಲ್ಲಿ ಚರ್ಚಿತವಾದ ಎಲ್ಲಾ ನಿರ್ಧಾರಗಳನ್ನೂ ಸಂಪೂರ್ಣವಾಗಿ ಜಾರಿಗೊಳಿಸಲಾಗುವುದು ಎಂದು ಕುಲಪತಿ ಮಾಧ್ಯಮದವರಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News