“ನಿಮಗೇಕೆ ಮುಸ್ಲಿಂ ಸ್ನೇಹಿತರು?'': ಸಿಎಎ ಪ್ರತಿಭಟನೆ ವೇಳೆ ಬಂಧಿತ ಹಿಂದೂ ಯುವಕನನ್ನು ಪ್ರಶ್ನಿಸಿದ್ದ ಪೊಲೀಸರು
ಲಕ್ನೋ: “ನೀವೊಬ್ಬ ಹಿಂದೂ, ನೀವೇಕೆ ಮುಸ್ಲಿಮರಿಗೆ ಸ್ನೇಹಿತರಾಗಿದ್ದೀರಿ?'' ಎಂಬ ಆಘಾತಕಾರಿ ಪ್ರಶ್ನೆಯನ್ನು ಉತ್ತರ ಪ್ರದೇಶದ ಪೊಲೀಸರು ಕಳೆದ ತಿಂಗಳು ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧದ ಪ್ರತಿಭಟನೆಗಳ ವೇಳೆ ಬಂಧನಕ್ಕೀಡಾಗಿದ್ದ ಸಾಮಾಜಿಕ ಹೊರಾಟಗಾರ ರಾಬಿನ್ ವರ್ಮಾ ಅವರನ್ನು ಪ್ರಶ್ನಿಸಿದ್ದರೆಂದು ತಿಳಿದು ಬಂದಿದೆ.
ಡಿಸೆಂಬರ್ 20ರಂದು ‘ದಿ ಹಿಂದು’ ಪತ್ರಿಕೆಯ ಪತ್ರಕರ್ತ ಓಮರ್ ರಶೀದ್ ಜತೆ ರಾಬಿನ್ ವರ್ಮಾ ಅವರನ್ನೂ ಬಂಧಿಸಲಾಗಿತ್ತು. ರಶೀದ್ ಬಂಧನ ವಿಚಾರದ ದೂರು ಮುಖ್ಯಮಂತ್ರಿ ಕಚೇರಿ ತನಕವೂ ಹೋದ ನಂತರ ಅವರನ್ನು ಕೆಲ ಗಂಟೆಗಳ ನಂತರ ಬಿಡುಗಡೆಗೊಳಿಸಲಾಗಿತ್ತು. ತಮ್ಮ ಎದುರಿಗೇ ಪೊಲೀಸರು ರಾಬಿನ್ ವರ್ಮಾ ಆವರಗೆ ದಪ್ಪದ ಚರ್ಮದ ಬೆಲ್ಟ್‍ನಲ್ಲಿ ಹೊಡೆದಿದ್ದೇ ಅಲ್ಲದೆ ಹಲವು ಬಾರಿ ಅವರ ಕೆನ್ನೆಗೆ ಬಾರಿಸಿದ್ದರು ಎಂದು ರಶೀದ್ ನಂತರ ತಿಳಿಸಿದ್ದರು.
ಕಳೆದ ವಾರ ಜಾಮೀನು ಪಡೆದ ರಾಬಿನ್ ವರ್ಮಾ ಅವರನ್ನು ಮಂಗಳವಾರ ಲಕ್ನೋ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಗೊಳಿಸಲಾಗಿದೆ. ಜೈಲಿನಲ್ಲಿ ತಮಗೆ ಪೊಲೀಸರು ದೈಹಿಕ ಹಿಂಸೆ ನೀಡಿದ್ದರಲ್ಲದೆ ಅಪಮಾನಿಸಿದ್ದರು ಎಂದು ವರ್ಮಾ ಆರೋಪಿಸಿದ್ದಾರೆ. ತಮ್ಮ ಪತ್ನಿ ಹಾಗೂ ಎರಡು ವರ್ಷದ ಪುತ್ರಿಯನ್ನು ವೇಶ್ಯಾವಾಟಿಕೆಗೆ ತಳ್ಳುವುದಾಗಿಯೂ ಪೊಲೀಸರು ಬೆದರಿಸಿದ್ದರೆಂದು ಅವರು ದೂರಿದ್ದಾರೆ.
“ನನ್ನ ಮುಸ್ಲಿಂ ವಿದ್ಯಾರ್ಥಿಯೊಬ್ಬ ಹುಟ್ಟುಹಬ್ಬದ ದಿನ ಶುಭಾಶಯ ತಿಳಿಸಿದ್ದ. ಈ ಸಂದೇಶ ನೋಡಿದ ಪೊಲೀಸರು ನಿನಗೆ ಆತ ಗೊತ್ತೇನು? ನಿನ್ನ ಫೋನ್‍ನಲ್ಲಿ ಮುಸ್ಲಿಮರ ಹೆಸರುಗಳೇಕಿವೆ? ನೀನೇಕೆ ಅವರ ಸ್ನೇಹಿತನಾಗಿರುವೆ ಅವರ ಜತೆ ಏಕೆ ಹೋಗುತ್ತಿ ಎಂದು ಪ್ರಶ್ನಿಸಿದ್ದರು,'' ಎಂದು ಅವರು ಆರೋಪಿಸಿದ್ದಾರೆ.
ಸಾಮಾನ್ಯ ಉಡುಪಿನಲ್ಲಿದ್ದ ಪೊಲೀಸರ ಹಿಂಸೆಗೆ ತಮ್ಮ ಕೈಬೆರಳಿಗೆ ಗಾಯವಾಗಿದೆ ಎಂದೂ ಅವರು ಹೇಳಿದ್ದಾರ. ತಮ್ಮನ್ನು ಹಜರತ್‍ಗಂಜ್ ಠಾಣೆಯಲ್ಲಿರಿಸಲಾಗಿದ್ದ ಸಂದರ್ಭ ಅನ್ನ, ನೀರು ಹಾಗೂ ಹೊದಿಕೆ ಕೂಡ ನೀಡಿಲ್ಲ ಎಂದು ಅವರು ದೂರಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಕೊಲೆಯತ್ನ, ಕ್ರಿಮಿನಲ್ ಸಂಚು ಹಾಗೂ ಸಾರ್ವಜನಿಕ ಆಸ್ತಿ ಹಾನಿ ದೂರುಗಳನ್ನು ಅವರು ನಿರಾಕರಿಸುತ್ತಾರೆ.