ಗುಜರಾತ್: ನೂತನ ಜಿಸಿಟಿಒಸಿ ಕಾಯ್ದೆಯಡಿ ಏಳು ಜನರ ವಿರುದ್ಧ ಮೊದಲ ಪ್ರಕರಣ ದಾಖಲು

Update: 2020-01-15 14:36 GMT

ಅಹ್ಮದಾಬಾದ್,ಜ.15: ಗುಜರಾತ್ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಜಿಸಿಟಿಒಸಿ)ಯಡಿ ಕುಖ್ಯಾತ ಗ್ಯಾಂಗ್‌ಸ್ಟರ್ ವಿಶಾಲ ಗೋಸ್ವಾಮಿ ಮತ್ತು ಆತನ ಆರು ಸಹಚರರ ವಿರುದ್ಧ ಬುಧವಾರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದು 2019,ಡಿ.1ರಿಂದ ಜಾರಿಗೆ ಬಂದಿರುವ ಕಾಯ್ದೆಯಡಿ ದಾಖಲಾಗಿರುವ ಮೊದಲ ಪ್ರಕರಣವಾಗಿದೆ.

2012ರ ಅಪರಾಧ ಪ್ರಕರಣವೊಂದರಲ್ಲಿ ಏಳು ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸುತ್ತಿರುವ ಗೋಸ್ವಾಮಿ ಹಾಗೂ ಇಬ್ಬರು ಸಹಚರರಾದ ಅಜಯ ಮತ್ತು ರಿಂಕು ಹಾಲಿ ಅಹ್ಮದಾಬಾದ್ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಗ್ಯಾಂಗಿನ ಇತರ ನಾಲ್ವರು ಸದಸ್ಯರನ್ನು ಬುಧವಾರ ಬಂಧಿಸಲಾಗಿದೆ. ಗೋಸ್ವಾಮಿ ಮತ್ತು ಸಹಚರರು ಜೈಲಿನೊಳಗಿಂದಲೇ ಮೊಬೈಲ್ ಫೋನ್‌ಗಳನ್ನು ಬಳಸಿ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಹಫ್ತಾ ವಸೂಲಿ ದಂಧೆಯನ್ನು ನಡೆಸುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಗೋಸ್ವಾಮಿಯ ಸೂಚನೆಯ ಮೇರೆಗೆ ಕೆಲಸ ಮಾಡುತ್ತಿದ್ದ ಗ್ಯಾಂಗಿನ ನಾಲ್ವರನ್ನು ಬಂಧಿಸಿದ್ದಾರೆ ಎಂದು ವಿಶೇಷ ಪೊಲೀಸ್ ಆಯುಕ್ತ ಅಜಯ ತೋಮರ್ ತಿಳಿಸಿದರು.

 ಗೋಸ್ವಾಮಿ ಮತ್ತು ಇತರ ಇಬ್ಬರ ಬಳಿಯಿಂದ ಮೂರು ಮೊಬೈಲ್ ಫೋನ್‌ಗಳು,ಸಿಮ್ ಕಾರ್ಡ್‌ಗಳು,ಫೋನ್ ನಂಬರ್‌ಗಳಿದ್ದ ನೋಟ್‌ಬುಕ್ ಹಾಗೂ ಇತರ ನಾಲ್ವರಿಂದ 20 ಮೊಬೈಲ್ ಫೋನ್‌ಗಳು,50,000 ರೂ.ನಗದು, ಪಿಸ್ತೂಲು ಮತ್ತು ಗುಂಡುಗಳು,ಬೈಕ್ ಮತ್ತು ಕಾರೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೋಸ್ವಾಮಿ ಮತ್ತು ಆತನ ಗ್ಯಾಂಗಿನ ವಿರುದ್ಧ ಗುಜರಾತ್,ಮಧ್ಯಪ್ರದೇಶ,ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ 50ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಮತ್ತು ನ್ಯಾಯಾಲಯಗಳಲ್ಲಿ ತಮ್ಮ ವಿರುದ್ಧ ಸಾಕ್ಷ ನುಡಿಯುವವರಿಗೆ ಆರೋಪಿಗಳು ಬೆದರಿಕೆಯೊಡ್ಡುತ್ತಿದ್ದರು ಎಂದು ತೋಮರ್ ತಿಳಿಸಿದರು.

ಕದ್ದಾಲಿಸಿದ ದೂರವಾಣಿ ಸಂಭಾಷಣೆಗಳನ್ನು ಈಗ ಶಾಸನಬದ್ಧ ಸಾಕ್ಷವನ್ನಾಗಿ ಪರಿಗಣಿಸಲಾಗುತ್ತದೆ ಎನ್ನುವುದು ಜಿಸಿಟಿಒಸಿಯ ಪ್ರಮುಖ ವೈಶಿಷ್ಟಗಳಲ್ಲೊಂದಾಗಿದೆ.

ನೂತನ ಕಾಯ್ದೆಗೆ ಮೊದಲು ಗುಜರಾತ್ ಸಂಘಟಿತ ಅಪರಾಧಗಳ (ಗುಜ್‌ಕೋಕ್) ಮಸೂದೆ ಎಂದು ಹೆಸರಿಸಲಾಗಿದ್ದು,ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2004ರಿಂದ ಮೂರು ಬಾರಿ ರಾಷ್ಟ್ರಪತಿಗಳ ಅಂಕಿತ ಪಡೆಯಲು ವಿಫಲಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News