ದಿಲ್ಲಿ ಪೊಲೀಸರಿಂದ ನಸುಕಿನಲ್ಲಿ ಟೆಂಟ್ ಧ್ವಂಸ: ಸಿಎಎ ವಿರೋಧಿ ಪ್ರತಿಭಟನಾಕಾರರ ಆರೋಪ

Update: 2020-01-15 14:45 GMT

ಹೊಸದಿಲ್ಲಿ,ಜ.15: ಬುಧವಾರ ನಸುಕಿನ ಎರಡು ಗಂಟೆಯ ಸುಮಾರಿಗೆ ತಮ್ಮ ಪ್ರತಿಭಟನಾ ಸ್ಥಳಕ್ಕೆ ನುಗ್ಗಿದ ಪೊಲೀಸರು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ,ತಮ್ಮ ಟೆಂಟ್‌ಗಳನ್ನು ಕೆಡವಿ ತಮ್ಮನ್ನು ಬಲಪ್ರಯೋಗದಿಂದ ತೆರವುಗೊಳಿಸಲು ಪ್ರಯತ್ನಿಸಿದ್ದರು ಎಂದು ಪೂರ್ವ ದಿಲ್ಲಿಯ ಖುರೇಜಿಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿರುವ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ ಇಂತಹ ಯಾವುದೇ ಬಲವಂತದ ಕ್ರಮವನ್ನು ದಿಲ್ಲಿ ಪೊಲೀಸರು ನಿರಾಕರಿಸಿದ್ದಾರೆ.

ಸಿಎಎ ಮತ್ತು ಎನ್‌ಆರ್‌ಸಿಯನ್ನು ವಿರೋಧಿಸಿ ಸೋಮವಾರದಿಂದ ಇಲ್ಲಿ ಪ್ರತಿಭಟನೆ ನಡೆಯುತ್ತಿದೆ.

ನಸುಕಿನ ಎರಡು ಗಂಟೆಯ ಸುಮಾರಿಗೆ 15 ಮಹಿಳೆಯರು ಸೇರಿದಂತೆ ಸುಮಾರು ಮೂರು ಡಝನ್ ಪ್ರತಿಭಟನಾಕಾರರು ಸ್ಥಳದಲ್ಲಿದ್ದಾಗ ಅಲ್ಲಿಗೆ ನುಗ್ಗಿದ ಪೊಲೀಸರು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ,ವೇದಿಕೆಯ ಮುಂಭಾಗದಲ್ಲಿ ಹಾಕಲಾಗಿದ್ದ ಟೆಂಟ್ ಅನ್ನು ಕೆಡವಿ ದಾಂಧಲೆ ನಡೆಸಿದ್ದರು. ಸುದ್ದಿ ತಿಳಿದು ನೂರಾರು ಜನರು ಜಮಾಯಿಸಿದಾಗ ಪೊಲೀಸರು ಸ್ಥಳದಿಂದ ತೆರಳಿದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದರು.

ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಟೆಂಟ್‌ನ್ನು ಪುನಃ ಹಾಕಲಾಗಿದೆ. ನೂರಾರು ಜನರು ಸ್ಥಳದಲ್ಲಿ ಸೇರಿದ್ದು, ಮಹಿಳೆಯರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು.

ಪ್ರತಿಭಟನಾ ಸ್ಥಳದಲ್ಲಿ ಡಝನ್‌ಗೂ ಅಧಿಕ ಮಹಿಳೆಯರಿದ್ದರು. ದಾಂಧಲೆ ನಡೆಸುವ ಉದ್ದೇಶದಿಂದ ನಸುಕಿನ ಎರಡು ಗಂಟೆಗೆ ಪೊಲೀಸರು ಅಲ್ಲಿಗೆ ನುಗ್ಗಿದ್ದಾರೆ. ಜೊತೆಯಲ್ಲಿ ಮಹಿಳಾ ಪೊಲೀಸರು ಇರಲಿಲ್ಲ. ಇದು ಸಂವಿಧಾನಬದ್ಧವೇ ಎಂದು ಖುರೇಜಿಯಲ್ಲಿ ಬಡವರಿಗಾಗಿ ಶಾಲೆಯನ್ನು ನಡೆಸುತ್ತಿರುವ ಝಫರ್ ಅಹ್ಸಾನ್ ಕರೀಮಿ ಅವರು ಸುದ್ದಿಗಾರರನ್ನು ಪ್ರಶ್ನಿಸಿದರು.

ಪ್ರತಿಭಟನಾ ಸ್ಥಳದಲ್ಲಿ ಯಾವುದೇ ಬಲವಂತದ ಕ್ರಮವನ್ನು ನಡೆಸಿಲ್ಲ. ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲಿಸರು ಬಯಸಿದ್ದರೆ ಆ ಕೆಲಸವನ್ನು ಮಾಡುತ್ತಿದ್ದರು. ಈಗಲೂ ಅಲ್ಲಿ ಪ್ರತಿಭಟನಾಕಾರರಿದ್ದಾರೆ ಎಂದು ಜಂಟಿ ಪೊಲೀಸ ಆಯುಕ್ತ ಅಲೋಕ ಕುಮಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News