ಟ್ರಂಪ್ ಒಪ್ಪಂದ: ಬೊರಿಸ್ ಜಾನ್ಸನ್ ಮಾತಿಗೆ ಸಹಮತವಿದೆ; ಡೊನಾಲ್ಡ್ ಟ್ರಂಪ್

Update: 2020-01-15 17:08 GMT

ವಾಶಿಂಗ್ಟನ್, ಜ. 15: ಇರಾನ್ ಪರಮಾಣು ಒಪ್ಪಂದದ ಬದಲಿಗೆ ‘ಟ್ರಂಪ್ ಒಪ್ಪಂದ’ ಜಾರಿಗೆ ಬರಬೇಕು ಎಂಬ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್‌ರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘‘ ‘ಇರಾನ್ ಒಪ್ಪಂದದ ಸ್ಥಾನದಲ್ಲಿ ನಾವು ಟ್ರಂಪ್ ಒಪ್ಪಂದವನ್ನು ತರಬೇಕು’ ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಹೇಳಿದ್ದಾರೆ’’ ಎಂದು ಮಂಗಳವಾರ ರಾತ್ರಿ ಮಾಡಿದ ಟ್ವೀಟ್‌ನಲ್ಲಿ ಟ್ರಂಪ್ ಹೇಳಿದ್ದಾರೆ. ‘‘ನಾನು ಇದಕ್ಕೆ ಒಪ್ಪುತ್ತೇನೆ!’’ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಇರಾನ್ ಪರಮಾಣು ಶಸ್ತ್ರವನ್ನು ಹೊಂದುವುದನ್ನು ತಡೆಯುವುದಕ್ಕಾಗಿ ಇರಾನ್ ಪರಮಾಣು ಒಪ್ಪಂದದ ಬದಲಿಗೆ ಟ್ರಂಪ್ ತನ್ನದೇ ಒಪ್ಪಂದವೊಂದನ್ನು ಹೊಂದಬೇಕು ಎಂದು ಜಾನ್ಸನ್ ಮಂಗಳವಾರ ಹೇಳಿದ್ದಾರೆ.

 ‘ಟ್ರಂಪ್ ಒಪ್ಪಂದ’ವನ್ನು ತಿರಸ್ಕರಿಸಿದ ಇರಾನ್:  ಪರಮಾಣು ವಿವಾದವನ್ನು ಬಗೆಹರಿಸಿಕೊಳ್ಳುವ ಉದ್ದೇಶದಿಂದ ಹೊಸ ‘ಟ್ರಂಪ್ ಒಪ್ಪಂದ’ವೊಂದನ್ನು ಹೊಂದುವ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಪ್ರಸ್ತಾಪವನ್ನು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಬುಧವಾರ ತಳ್ಳಿಹಾಕಿದ್ದಾರೆ. ಇದೊಂದು ‘ವಿಚಿತ್ರ’ ಹೇಳಿಕೆಯಾಗಿದೆ ಎಂದು ಹೇಳಿದ ಅವರು, ಅಮೆರಿಕ ಯಾವಾಗಲೂ ತಾನು ನೀಡಿದ ಭರವಸೆಗಳನ್ನು ಮುರಿಯುತ್ತದೆ ಎಂದರು.

‘‘ಬ್ರಿಟನ್ ಪ್ರಧಾನಿ ಹೇಗೆ ಯೋಚನೆ ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ನಾವು ಪರಮಾಣು ಒಪ್ಪಂದವನ್ನು ಬದಿಗೆ ಸರಿಸಿ ಟ್ರಂಪ್ ಯೋಜನೆಯನ್ನು ಜಾರಿಗೆ ತರುವ ಎಂದು ಅವರು ಹೇಳುತ್ತಾರೆ’’ ಎಂದು ಹೇಳಿದರು.

‘‘ನಾವು ತಪ್ಪು ಹೆಜ್ಜೆಯನ್ನು ಇಟ್ಟರೆ ಅದು ನಮಗೆ ಮಾರಕವಾಗುತ್ತದೆ. ಸರಿಯಾದ ಮಾರ್ಗವನ್ನು ಆರಿಸಿಕೊಳ್ಳಿ. ಪರಮಾಣು ಒಪ್ಪಂದಕ್ಕೆ ಹಿಂದಿರುಗುವುದು ಸರಿಯಾದ ಮಾರ್ಗವಾಗಿದೆ’’ ಎಂದು ರೂಹಾನಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News