ಜಮ್ಮುಕಾಶ್ಮೀರದಲ್ಲಿ ಬ್ರಾಡ್‌ಬ್ಯಾಂಡ್ 2ಜಿ ಸೇವೆ ಭಾಗಶಃ ಮರುಸ್ಥಾಪನೆ

Update: 2020-01-15 18:27 GMT

ಶ್ರೀನಗರ, ಜ. 15: ಜಮ್ಮುಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಿಸಿರುವ ನಿರ್ಬಂಧ ಮರು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ದಿನದ ಬಳಿಕ ಜಮ್ಮು ಹಾಗೂ ಕಾಶ್ಮೀರದಲ್ಲಿ ಬ್ರಾಡ್‌ಬ್ಯಾಂಡ್ ಹಾಗೂ 2ಜಿ ಇಂಟರ್‌ನೆಟ್ ಸೇವೆಯನ್ನು ಭಾಗಶಃ ಮರು ಸ್ಥಾಪಿಸಲಾಗಿದೆ. ಆದರೆ, ಸಾಮಾಜಿಕ ಮಾಧ್ಯಮಕ್ಕೆ ನಿರ್ಬಂಧ ಹೇರಲಾಗಿದೆ. ಈ ಆದೇಶ ಜನವರಿ 15ರಂದು ಅಸ್ತಿತ್ವಕ್ಕೆ ಬಂದಿದೆ. ಮುಂದಿನ 7 ದಿನಗಳ ಕಾಲ ಅಸ್ತಿತ್ವದಲ್ಲಿ ಇರಲಿದೆ ಎಂದು ಸರಕಾರದ ಹೇಳಿಕೆ ತಿಳಿಸಿದೆ. ಮೂರು ಪುಟಗಳ ಆದೇಶದಲ್ಲಿ ಆಡಳಿತ, ಆಸ್ಪತ್ರೆ, ಬ್ಯಾಂಕ್ ಹಾಗೂ ಸರಕಾರಿ ಕಚೇರಿಗಳಂತಹ ಅಗತ್ಯದ ಸೇವೆ ನೀಡುವ ಎಲ್ಲ ಸಂಸ್ಥೆಗಳಿಗೆ ಬ್ರಾಡ್‌ಬ್ಯಾಂಡ್ ಸೌಲಭ್ಯ ನೀಡುವಂತೆ ಇಂಟರ್‌ನೆಟ್ ಸೇವೆ ಪೂರೈಕೆದಾರರಲ್ಲಿ ಸೂಚಿಸಿದೆ.

ಪ್ರವಾಸೋದ್ಯಮವನ್ನು ಸುಗಮಗೊಳಿಸಲು ಹೊಟೇಲ್, ಪ್ರವಾಸ ಹಾಗೂ ಪ್ರಯಾಣ ಸಂಸ್ಥೆಗಳಿಗೆ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆಯನ್ನು ಪೂರೈಸುವಂತೆ ಕೂಡ ಆದೇಶ ಹೇಳಿದೆ. ಇ ಬ್ಯಾಂಕಿಂಗ್ ಸೇರಿದಂತೆ ಬಿಳಿ ಪಟ್ಟಿಯಲ್ಲಿರುವ ವೆಬ್‌ಸೈಟ್‌ಗಳು ಲಭ್ಯವಾಗಲು ಪೋಸ್ಟ್‌ಪೇಯ್ಡೆ ಮೊಬೈಲ್‌ಗಳಿಗೆ 2ಜಿ ಸಂಪರ್ಕವನ್ನು ಜಮ್ಮು ವಲಯದ ಜಮ್ಮು, ಸಾಂಬಾ, ಕಥುವಾ, ಉದಮ್‌ಪುರ ಹಾಗೂ ರಿಯಾಸಿಯಲ್ಲಿ ಅವಕಾಶ ನೀಡಲಾಗುವುದು ಎಂದು ಆದೇಶ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News