ನೋಟುಗಳಲ್ಲಿ ಲಕ್ಷ್ಮಿಯ ಚಿತ್ರವಿದ್ದರೆ ರೂಪಾಯಿ ಮೌಲ್ಯ ಸುಧಾರಣೆಯಾಗಬಹುದು: ಸುಬ್ರಮಣಿಯನ್ ಸ್ವಾಮಿ

Update: 2020-01-16 11:14 GMT

ಭೋಪಾಲ್: ಭಾರತದ ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ ದೇವಿಯ ಚಿತ್ರವನ್ನು ಮುದ್ರಿಸಿದರೆ ರೂಪಾಯಿ ಮೌಲ್ಯ ಸುಧಾರಿಸಬಹುದೆಂದು ರಾಜ್ಯಸಭಾ ಸಂಸದ ಹಾಗೂ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಮಧ್ಯ ಪ್ರದೇಶದ ಖಂಡ್ವ ಜಿಲ್ಲೆಯಲ್ಲಿ ಸ್ವಾಮಿ ವಿವೇಕಾನಂದ ವ್ಯಾಖ್ಯಾನ್ಮಾಲ ಕಾರ್ಯಕ್ರಮದಲ್ಲಿ ಭಾಷಣ ನೀಡಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

ಇಂಡೊನೇಷ್ಯಾದ ಕರೆನ್ಸಿಯಲ್ಲಿ ಗಣೇಶನ ಚಿತ್ರವಿರುವ ಕುರಿತಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ "ಈ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬಲ್ಲರು. ನಾನು ಇದರ ಪರ ಇದ್ದೇನೆ. ಗಣೇಶ ದೇವರ ವಿಘ್ನ ನಿವಾರಿಸುತ್ತಾರೆ. ಲಕ್ಷ್ಮಿ ದೇವಿಯ ಚಿತ್ರ ಭಾರತದ ಕರೆನ್ಸಿಯ ಸ್ಥಿತಿಯನ್ನು ಸುಧಾರಿಸಬಹುದು,'' ಎಂದು ಸ್ವಾಮಿ ಹೇಳಿದರು.

ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ಯಾವುದೇ ಆಕ್ಷೇಪಾರ್ಹ ವಿಚಾರವಿಲ್ಲ ಎಂದು ಹೇಳಿದ ಅವರು "ಕಾಂಗ್ರೆಸ್ ಹಾಗೂ ಮಹಾತ್ಮ ಗಾಂಧಿ ಕೂಡ ಸಿಎಎ ಬೇಕೆಂದಿದ್ದರು. ಮನಮೋಹನ್ ಸಿಂಗ್ ಕೂಡ 2003ರಲ್ಲಿ ಸಂಸತ್ತಿನಲ್ಲಿ ಮನವಿ ಮಾಡಿದ್ದರು. ಆದರೆ ಈಗ ಅವರು ಅದಕ್ಕೆ ಒಪ್ಪದೆ ಪಾಕ್ ಮುಸ್ಲಿಮರಿಗೆ ಅನ್ಯಾಯವಾಗಿದೆ ಎನ್ನುತ್ತಿದ್ದಾರೆ. ಏನು ಅನ್ಯಾಯವಾಗಿದೆ? ಅಲ್ಲಿನ ಮುಸ್ಲಿಮರಿಗೆ ಬರಲು ಮನಸ್ಸಿಲ್ಲ, ನಾವು ಬಲವಂತ ಪಡಿಸಲು ಸಾಧ್ಯವಿಲ್ಲ,'' ಎಂದು ಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News