ಸಂವಿಧಾನ ದಿನಾಚರಣೆಯಲ್ಲಿ ಸಿಎಎ ವಿರೋಧಿಸಿ ಭಾಷಣ ಮಾಡಿದ ವಿದ್ಯಾರ್ಥಿನಿ

Update: 2020-01-18 18:25 GMT

ಪಣಜಿ, ಜ.18: ಗೋವಾ ಸರಕಾರದ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳು ಪೌರತ್ವ ಕಾಯ್ದೆಯನ್ನು ವಿರೋಧಿಸಿ ಭಾಷಣ ಮಾಡಿದ ಘಟನೆ ನಡೆದಿದೆ.

70ನೇ ಸಂವಿಧಾನ ದಿನಾಚರಣೆ ಅಂಗವಾಗಿ ಗೋವಾದ ಶಿಕ್ಷಣ ಇಲಾಖೆಯ ನಿರ್ದೇಶಕಿ ವಂದನಾ ರಾವ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ದಕ್ಷಿಣ ಗೋವಾದ ಮರಿಯಾ ಬಾಂಬಿನೊ ಹೈಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿನಿ ದೀಕ್ಷಾ ತಲೌಲಿಕಾರ್ ಮಾತನಾಡಿ, ಪೌರತ್ವ ಕಾಯ್ದೆಯು ಸಂವಿಧಾನ ಮತ್ತು ಅದರ ಪ್ರತಿಪಾದನೆಯ ಕಗ್ಗೊಲೆಯಾಗಿದೆ ಎಂದರು.

 ಮುಸ್ಲಿಮರ ವಿರುದ್ಧ ತಾರತಮ್ಯ ಎಸಗುವ ಈ ಕಾಯ್ದೆಯು ಸಾಮರಸ್ಯಕ್ಕೆ ಪ್ರೋತ್ಸಾಹ ನೀಡುವ ಹಾಗೂ ಧರ್ಮ, ಪ್ರದೇಶ ಮತ್ತು ಭಾಷಾ ವೈವಿಧ್ಯತೆಯ ಜನರೊಳಗೆ ಸಹೋದರತ್ವದ ಭಾವನೆ ಬೆಂಬಲಿಸುವ ನನ್ನ ಮೂಲಭೂತ ಕರ್ತವ್ಯದ ಅಪಹಾಸ್ಯವಾಗಿದೆ. ರಾಷ್ಟ್ರ ಹೊತ್ತಿ ಉರಿಯುತ್ತಿದೆ. ಸಂವಿಧಾನದ ಆಶಯ, ಅದರ ಪೀಠಿಕೆ, ಸ್ವಾತಂತ್ರ, ಸಮಾನತೆ ಹಾಗೂ ಭ್ರಾತೃತ್ವದ ಕೊಲೆಯಾಗಿದೆ ಎಂದು ದೀಕ್ಷಾ ತನ್ನ 4 ನಿಮಿಷದ ಭಾಷಣದಲ್ಲಿ ಹೇಳಿದ್ದಾಳೆ.

ದೇಶದ ಮುಸ್ಲಿಮ್ ಸಹೋದರ, ಸಹೋದರಿಯರಲ್ಲಿ ತಾರತಮ್ಯ ಮಾಡಿರುವ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಯುವ ವಿದ್ಯಾರ್ಥಿಗಳು ಮತ್ತು ನಾಗರಿಕರು(ಇವರಲ್ಲಿ ಹೆಚ್ಚಿನವರು ಹಿಂದೂಗಳು) ಬೀದಿಗಿಳಿದು ಪ್ರತಿಭಟಿಸುವ ಸ್ಥಿತಿ ಬಂದಿರುವುದಕ್ಕೆ ಬೇಸರವಾಗುತ್ತದೆ. ದೇಶ ಈಗ ಅನುಭವಿಸುತ್ತಿರುವ ಸ್ವಾತಂತ್ರ್ಯದಲ್ಲಿ ನಮ್ಮ ಮುಸ್ಲಿಮ್ ಸಹೋದರ ಸಹೋದರಿಯರ ತ್ಯಾಗ ಮತ್ತು ಬಲಿದಾನವಿಲ್ಲವೇ? ಸಂವಿಧಾನ ರಚಿಸಿದ್ದವರಲ್ಲಿ ಹೆಚ್ಚಿನವರು ಹಿಂದೂಗಳಾಗಿದ್ದರು. ಆದರೆ ದೇಶದ ಜಾತ್ಯಾತೀತ ಸ್ವರೂಪವನ್ನು ಛಿದ್ರಗೊಳಿಸುವ ಕುರಿತು ಅವರೆಂದೂ ಯೋಚಿಸಿರಲಿಲ್ಲ. ಆದರೆ ಈಗ ಅಧಿಕಾರದಲ್ಲಿ ಉಳಿಯಬೇಕೆನ್ನುವ ಏಕೈಕ ಅತಿಯಾಸೆಯಿಂದ ಸಿದ್ಧಾಂತಗಳನ್ನು ಜನರ ಮೇಲೆ ಹೇರಲಾಗುತ್ತಿದೆ ಎಂದು ವಿದ್ಯಾರ್ಥಿನಿ ಅಭಿಪ್ರಾಯ ಪಟ್ಟಿದ್ದಾಳೆ.

ಕಾರ್ಯಕ್ರಮದಲ್ಲಿ ಗೋವಾ ಅಡ್ವೊಕೇಟ್ ಜನರಲ್ ದೇವಿದಾಸ ಪಂಗಮ್, 400ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯ ಭಾಷಣವನ್ನು ಖಂಡಿಸಿರುವ ಗೋವಾದ ಬಿಜೆಪಿ ಶಾಸಕ ಸಿದ್ದಾರ್ಥ ಕುನ್‌ಕೋಲಿಯಂಕರ್, ಸರಕಾರದ ಕಾರ್ಯಕ್ರಮದಲ್ಲಿ ಈ ರೀತಿ ನಡೆದಿರುವುದು ಸರಿಯಲ್ಲ. ಘಟನೆಯ ಬಗ್ಗೆ ಮುಖ್ಯಮಂತ್ರಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News