ಶ್ರೀ ಭರತ ಬಾಹುಬಲಿ: ಹಳಿ ತಪ್ಪುವ ಪ್ರೇಮ ಪಯಣ

Update: 2020-01-18 18:27 GMT

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಮೂರು ಮಂದಿಯ ನಡುವೆ ಸಾಗುವ ಕಥೆ. ಭರತ ಮತ್ತು ಬಾಹುಬಲಿ ಎನ್ನುವ ಆಪ್ತ ಮಿತ್ರರ ನಡುವೆ ಪರಿಚಯವಾಗುವ ಶ್ರೀ ಎನ್ನುವ ಯುವತಿಯ ಕಥೆ. ಹಾಗಂತ ಇದು ತ್ರಿಕೋನ ಪ್ರೇಮದ ಕಥೆ ಖಂಡಿತಾ ಅಲ್ಲ. ಶ್ರವಣ ಬೆಳಗೊಳದ ಆಸುಪಾಸಿನ ಹಳ್ಳಿಯವರಾದರೂ ಈ ಸ್ನೇಹಿತರಿಗೆ ಆ ಪುರಾಣ ಪುರುಷರ ಆದರ್ಶದ ಅರಿವೇ ಇರುವುದಿಲ್ಲ. ಪಕ್ಕಾ ಹಳ್ಳಿಯ ಪೋಲಿ ಹೈದರಂತೆ ಗದ್ದೆ ಮಧ್ಯೆ ಇಸ್ಪೀಟಾಡುವುದೇ ಜೀವನ ಎಂದುಕೊಂಡವರು. ಪ್ರೇಮಿಗಳಿಗೆ ಸಹಾಯ ಮಾಡುವುದೇ ಆದರ್ಶ ಎಂದುಕೊಂಡು, ಆ ಪ್ರಯತ್ನದಲ್ಲಿ ಜೈಲು ಸೇರಿಕೊಂಡವರು. ಆದರೆ ಅವರಿಗೆ ಜಾಮೀನು ಕೊಟ್ಟು ಹೊರಗೆ ಕರೆದು ತರುವಾಕೆ ಶ್ರೀ ಎನ್ನುವ ಅಪರಿಚಿತ ಯುವತಿ! ಭಾರತೀಯ ಸಂಜಾತೆಯಾದ ಶ್ರೀ ವಿದೇಶದ ತನ್ನ ಸಾಕು ತಂದೆಯ ಬಳಿ ತನ್ನ ಊರಿನ ಬಗ್ಗೆ ತಿಳಿದು ಸತ್ಯ ಶೋಧಿಸಲು ಬಂದವಳು. ಪರರಿಗೆ ಉಪಕಾರಿಯಾದ ಈ ಸ್ನೇಹಿತರ ಬಳಿ ತನ್ನ ಮೂಲ ಹುಡುಕುವ ಪ್ರಯತ್ನ ನಡೆಸುತ್ತಾಳೆ. ಅದಕ್ಕೆ ಅವರ ಪ್ರತಿಕ್ರಿಯೆ ಹೇಗಿರುತ್ತದೆ? ಆ ಪ್ರಕ್ರಿಯೆಯಲ್ಲಿ ನಾಯಕಿಗೆ ತಂದೆ ತಾಯಿ ದೊರಕುತ್ತಾರ ಎನ್ನುವುದೇ ಚಿತ್ರದ ಕಥೆ. ಮಂಜು ಮಾಂಡವ್ಯ ಅವರಿಗೆ ನಾಯಕನಾಗಿ ಇದು ಪ್ರಥಮ ಚಿತ್ರ. ಹಾಗಂತ ಯಾವುದೇ ಬಿಲ್ಡಪ್, ಇಮೇಜ್‌ಗಳಿಗೆ ಬಲಿಯಾಗದೆ, ಭರತನಾಗಿ ಕಾಮಿಡಿ ಹೀರೋ ಎನ್ನಬಹುದಾದ ಪಾತ್ರ ನಿರ್ವಹಿಸಿದ್ದಾರೆ. ಸ್ವತಃ ನಿರ್ದೇಶನ ಮಾಡಿದ್ದರೂ, ಸಂಭಾಷಣೆ ತಮ್ಮ ಅಧೀನದಲ್ಲಿದ್ದರೂ ತಮಗಾಗಿ ಪಂಚ್ ಸುರಿಮಳೆ ಮಾಡಿಕೊಂಡಿಲ್ಲ ಎನ್ನುವುದಕ್ಕಾಗಿ ಮೆಚ್ಚಲೇಬೇಕು. ಅದೇ ವೇಳೆ ಬಾಹುಬಲಿಯಾಗಿ ಚಿಕ್ಕಣ್ಣ ಚಿತ್ರಕ್ಕೆ ಶಕ್ತಿ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಹಾಸ್ಯದ ಜತೆಜತೆಗೆ ಭಾವನಾತ್ಮಕ ಸನ್ನಿವೇಶಗಳು ಕೂಡ ಇವೆ. ಸ್ನೇಹಿತರಿಬ್ಬರಿಂದಲೂ ಏಕಮುಖವಾಗಿ ಪ್ರೀತಿಸಲ್ಪಡುವ ಯುವತಿಯಾಗಿ ಶ್ರೇಯಾ ಶೆಟ್ಟಿಯ ಪಾತ್ರ ಅನಗತ್ಯ ಪ್ರಾಧಾನ್ಯತೆ ಪಡೆದುಕೊಂಡಿದೆ. ಅದೇ ಕಾರಣದಿಂದ ಸಾರಾ ಹರೀಶ್ ನಿರ್ವಹಿಸಿರುವ ಪಾತ್ರ ಮನಸ್ಸಿಗೆ ನಾಟಲು ಕಷ್ಟವೆನಿಸುತ್ತದೆ. ಆದರೆ ಸಾರಾ ಅವರು ತಮ್ಮ ವಿಭಿನ್ನ ಕಂಠದ ಮೂಲಕವೇ ಮನಸೆಳೆಯುತ್ತಾರೆ.

 ತೇಜ್ ಚರಣ್ ನಟಿಸಿರುವ ಬಾಹುಬಲಿಯ ಪೌರಾಣಿಕ ತುಣುಕು ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ. ಹೆಚ್ಚುವರಿ ಎಪಿಸೋಡ್‌ಗಳು, ಕನಸುಗಳು, ಫ್ಲಾಶ್ ಬ್ಯಾಕ್ ಇಂಟರ್‌ಕಟ್‌ಗಳು ವಿಪರೀತವಾಗಿವೆ. ಆದರೆ ಕ್ಲೈಮ್ಯಾಕ್ಸ್‌ನಲ್ಲಿ ನೀಡಲಾಗಿರುವ ಸಂದೇಶದಲ್ಲಿ ತ್ಯಾಗ ಮನೋಭಾವ ಮತ್ತು ಪೋಷಕರನ್ನು, ಹಿರಿಯರನ್ನು ಗೌರವಿಸಿ ಕಾಳಜಿಯಿಂದ ನೋಡಿಕೊಳ್ಳಬೇಕಾದ ಕರ್ತವ್ಯವನ್ನು ಎಚ್ಚರಿಸುವಂತಿದೆ.
ಚಿತ್ರದಲ್ಲಿ ಸಾಕಷ್ಟು ಜನಪ್ರಿಯ ಕಲಾವಿದರು ಅಭಿನಯಿಸಿದ್ದು ಎರಡೇ ದೃಶ್ಯದಲ್ಲಿ ಬಂದರೂ, ಅಚ್ಯುತ್ ಕುಮಾರ್ ನೆನಪಲ್ಲಿ ಉಳಿಯುತ್ತಾರೆ. ಕಥೆಯೊಳಗೆ ಭವ್ಯಾ ಅವರ ಆಗಮನ ಅವರ ಪಾತ್ರದಷ್ಟೇ ಟ್ವಿಸ್ಟ್ ಮೂಡಿಸುತ್ತದೆ. ರಿಷಿ, ಪ್ರಖ್ಯಾತ್ ಮೊದಲಾದವರು ಸೇರಿದಂತೆ ಕರಿಸುಬ್ಬು ಮೊದಲಾದ ಕಲಾವಿದರು ಸಣ್ಣಪುಟ್ಟ ಪಾತ್ರ ಗಳಲ್ಲಿ ಕಾಣಿಸಿಕೊಂಡು ಚಿತ್ರಕ್ಕೆ ಲವಲವಿಕೆಯನ್ನು ತುಂಬಿದ್ದಾರೆ. ಹಿನ್ನೆಲೆ ಸಂಗೀತ ಮತ್ತು ಹಾಡಿನ ಮೂಲಕ ಮನಸೆಳೆವ ಮಣಿಕಾಂತ್ ಕದ್ರಿಯವರು ಅದರ ಜತೆ ಯಲ್ಲೇ ಪೊಲೀಸ್ ಅಧಿಕಾರಿಯಾಗಿಯೂ ಕಾಣಿಸಿ ಅಚ್ಚರಿ ಮೂಡಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸಂಭಾಷಣೆಯೇ ಇರದ ಖಳನಾಗಿ ಹರೀಶ್ ರೈಯವರ ಆಗಮನ ಇಡೀ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವಂತಿದೆ.
ಸಂಭಾಷಣೆ, ನಟನೆ, ನಿರ್ದೇಶನ ಸೇರಿದಂತೆ ಈ ಚಿತ್ರದಲ್ಲಿ ಬಹಳಷ್ಟು ವಿಭಾಗಗಳಲ್ಲಿ ಕೆಲಸ ಮಾಡಿ ಗೆದ್ದ ಮಂಜು ಮಾಂಡವ್ಯ ಅವರು ಕತೆಯಲ್ಲಿ ಹಲವಾರು ಆಯಾಮಗಳನ್ನು ಸೃಷ್ಟಿಸಿದ್ದು, ಅದರಲ್ಲಿ ಒಂದು ಅಂಶವನ್ನು ಸಾಮಾನ್ಯ ಪ್ರೇಕ್ಷಕರಿಗೆ ನಾಟುವಂತೆ ಹೇಳುವಲ್ಲಿ ಸೋತಿದ್ದಾರೆ.
ಉಳಿದಂತೆ ಮನರಂಜನೆಯನ್ನು ಗುರಿಯಾಗಿಸಿ ಥಿಯೇಟರ್‌ಗೆ ಹೋದವರಿಗೆ ಸರಾಸರಿ ಟೈಮ್ ಪಾಸ್‌ಗೆ ಹೇಳಿ ಮಾಡಿಸಿದಂತಹ ಚಿತ್ರ.

  ತಾರಾಗಣ: ಮಂಜು ಮಾಂಡವ್ಯ, ಸಾರಾ ಹರೀಶ್
  ನಿರ್ದೇಶನ: ಮಂಜು ಮಾಂಡವ್ಯ
  ನಿರ್ಮಾಣ: ಶಿವಪ್ರಕಾಶ್ ಟಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News