ಒಂದು ಗಣರಾಜ್ಯ ಸಾಯುವುದು ಹೇಗೆ?

Update: 2020-01-18 18:29 GMT

ಬಲಿಷ್ಠರು ಕೋಮು ಸಾಮರಸ್ಯ ಕೆಡುವ ಹಾಗೆ ಸಮಾಜದಲ್ಲಿ ಆತಂಕ ಸೃಷ್ಟಿಸುತ್ತಾರೆ. ತೋರಿಕೆಗೆ ಶಾಂತಿ ನೆಲೆಸುವಂತೆ ಕಾಣುತ್ತದೆ. ಸಾಂವಿಧಾನಿಕ ಸಂಸ್ಥೆಗಳು ಇದ್ದ ಹಾಗೆಯೇ ಇರುತ್ತದೆ. ಆದರೆ ವಿಧಿ ವಿಧಾನ ಹಾಗೂ ಕಾನೂನುಗಳನ್ನು ಅಧಿಕಾರದಲ್ಲಿರುವವರಿಗೆ ಲಾಭವಾಗುವಂತೆ ತಿರುಚಲಾಗುತ್ತದೆ, ವಿಧ್ವಂಸಗೊಳಿಸಲಾಗುತ್ತದೆ.


ಹಸಿ ಹಸಿ ಸುಳ್ಳುಗಳು, ಸಾಮೂಹಿಕ ಬಂಧನಗಳು, ಇಂಟರ್‌ನೆಟ್ ಶೆಟ್‌ಡೌನ್‌ಗಳು... ವರ್ತಮಾನ ಪತ್ರಿಕೆಗಳಲ್ಲಿ ದಪ್ಪ ಅಕ್ಷರಗಳಲ್ಲಿ ಇವೇ ಸುದ್ದಿಗಳು. ವಿದ್ಯಾರ್ಥಿಗಳ ಮೇಲೆ ದಾಳಿ, ಗ್ರಂಥಾಲಯಗಳ ಮೇಲೆ ಆಕ್ರಮಣ, ಪೊಲೀಸರಿಂದ ಶೆಲ್ ದಾಳಿ. ದೇಶ ಒಂದು ಅಂತರ್ಯುದ್ಧ ಅಥವಾ ಕ್ಷಿಪ್ರ ದಂಗೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದೆಯೋ ಎಂದು ನಿಮಗನ್ನಿಸುವ ಒಂದು ವಾತಾವರಣ.

2019ರ ಅಂತ್ಯದಲ್ಲಿ ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಘೋರವಾದ ಘಟನೆ ನಡೆದಿದೆ. ಪೌರತ್ವ ತಿದ್ದುಪಡಿ ಮಸೂದೆಯ ಹೆಸರಿನಲ್ಲಿ ಅಸಾಂವಿಧಾನಿಕವಾದ ಒಂದು ಹೆಜ್ಜೆಯನ್ನಿಟ್ಟ ಸರಕಾರದ ವಿರುದ್ಧ ಯುವಕರು, ಮುದುಕರು ಎಲ್ಲರೂ ಸೇರಿದಂತೆ ಸಹಸ್ರಾರು ಮಂದಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಹಲವಾರು ಮಂದಿ ಮಸೂದೆ ತರಲಿರುವ ಸಮಸ್ಯೆ ಹಾಗೂ ಅದರ ಅಸಾಂವಿಧಾನಿಕ ಸ್ವರೂಪದ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಆದರೂ ಅದನ್ನೆಲ್ಲ ಕೇಳಿಸಿಕೊಳ್ಳದೆ ಸುಳ್ಳುಗಳನ್ನು ಹರಡಲಾಗುತ್ತಿದೆ. ಪ್ರತಿಭಟನೆಗಳನ್ನು ಹತ್ತಿಕ್ಕಲಾಗುತ್ತಿದೆ. ಮೀಡಿಯಾದ ಮೇಲೆ ನಿರ್ಬಂಧ ಹೇರಲಾಗುತ್ತಿದೆ.

ಈಗ ಭಾರತದಲ್ಲಿ ಏನು ನಡೆಯುತ್ತಿದೆಯೋ ಅದು ಅಭಿವೃದ್ಧಿ ಹೊಂದಿದ ಜಗತ್ತಿನ ಬಹುಭಾಗದಲ್ಲಿ ನಡೆಯುತ್ತಿರುವುದರ ಪ್ರತಿಫಲನವಾಗಿದೆ. ವಿಶ್ವದ ಬಹುತೇಕ ಪ್ರಜಾಪ್ರಭುತ್ವಗಳಲ್ಲಿ ಸಮಾಜದ ಅಂಚಿನಲ್ಲಿರುವ ಜನಸಮುದಾಯಗಳು ತಮ್ಮ ದೇಶದ ದಮನಕಾರಿ ಸರಕಾರಗಳ ಕಾನೂನುಗಳಿಗೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಆಧುನಿಕ ಗಣರಾಜ್ಯಗಳ ನಿಧನ, ಅವಸಾನ ತುಂಬ ಸೂಕ್ಷ್ಮ. ಈಗ ಈ ಹಿಂದಿನ ಕ್ಷಿಪ್ರದಂಗೆ ನಡೆಯುವುದಿಲ್ಲ. ಸಚಿವಾಲಯಗಳಿಗೆ, ರಾಜಕೀಯ ನಾಯಕರ ನಿವಾಸಗಳಿಗೆ ಮುತ್ತಿಗೆ ಹಾಕಲಾಗುವುದಿಲ್ಲ. ಬದಲಾಗಿ ಸಮಾಜವನ್ನು ನಿಧಾನವಾಗಿ ದ್ವೇಷದ ಕಡೆಗೆ ಹೊರಳಿಸಲಾಗುತ್ತಿದೆ. ಜನ ಸಮುದಾಯಗಳ ನಡುವೆ ಗೋಡೆ ನಿರ್ಮಿಸಿ ಜನರು ಪರಸ್ಪರ ದ್ವೇಷಿಸುವಂತೆ ಮಾಡಲಾಗುತ್ತಿದೆ.

ಬಲಿಷ್ಠರು ಕೋಮು ಸಾಮರಸ್ಯ ಕೆಡುವ ಹಾಗೆ ಸಮಾಜದಲ್ಲಿ ಆತಂಕ ಸೃಷ್ಟಿಸುತ್ತಾರೆ. ತೋರಿಕೆಗೆ ಶಾಂತಿ ನೆಲೆಸುವಂತೆ ಕಾಣುತ್ತದೆ. ಸಾಂವಿಧಾನಿಕ ಸಂಸ್ಥೆಗಳು ಇದ್ದ ಹಾಗೆಯೇ ಇರುತ್ತದೆ. ಆದರೆ ವಿಧಿ ವಿಧಾನ ಹಾಗೂ ಕಾನೂನುಗಳನ್ನು ಅಧಿಕಾರದಲ್ಲಿರುವವರಿಗೆ ಲಾಭವಾಗುವಂತೆ ತಿರುಚಲಾಗುತ್ತದೆ, ವಿಧ್ವಂಸಗೊಳಿಸಲಾಗುತ್ತದೆ.

ಪಾಶವೀಕೃತ್ಯಗಳು, ಭಯಾನಕ ಅಪರಾಧಗಳು ನಡೆದಾಗ, ಅವುಗಳನ್ನು ತಡೆಯಲು ಕಾನೂನು ಅಶಕ್ತವಾಗುತ್ತದೆ. ಗುಂಪು ನ್ಯಾಯ ಒಂದು ಸಾಮಾನ್ಯ ನಿಯಮವಾಗುತ್ತದೆ. ಯಾವುದೇ ಹೆಚ್ಚಿನ ಚರ್ಚೆ ಇಲ್ಲದೆ ಅಸಾಂವಿಧಾನಿಕ ಮಸೂದೆಗಳು ಅಂಗೀಕಾರ ಪಡೆಯುತ್ತವೆ. ಒಂದು ಗಣರಾಜ್ಯ ಸಾಯುವುದು ಹೇಗೆ ಎಂದರೆ ಹೀಗೆ.ವರ್ತಮಾನ ಪತ್ರಿಕೆಗಳು ಸರಕಾರದ ತಾಳಕ್ಕೆ ತಕ್ಕಂತೆ ಕುಣಿದಾಗ, ಅಡ್ಡಹಾದಿ ಹಾಗೂ ಅಸಾಮರ್ಥ್ಯ ಅರ್ಥ ವ್ಯವಸ್ಥೆಯನ್ನು ಅಥವಾ ನ್ಯಾಯಾಂಗವನ್ನು ಸರಿದಾರಿಗೆ ತರುವ ಪ್ರಯತ್ನಗಳ ವೇಷ ಧರಿಸಿ ಬಂದಾಗ, ಕಾನೂನುಗಳನ್ನು ಹಾಗೂ ತತ್ವಗಳನ್ನು ಎತ್ತಿಹಿಡಿಯಬೇಕಾದ ಚಿಕ್ಕಪುಟ್ಟ ಕ್ರಿಯೆಗಳೇ ಅವುಗಳನ್ನು ಅಪವೌಲ್ಯಗೊಳಿಸುವಾಗ, ಆಗ ಒಂದು ಗಣರಾಜ್ಯ ಸಾಯುತ್ತದೆ.

ಚುನಾಯಿತ ಜನಪ್ರತಿನಿಧಿಗಳು ಸಂಪರ್ಕ/ಸಂವಹನ ಮಾಧ್ಯಮಗಳನ್ನು ಅಸ್ತ್ರವಾಗಿ ಬಳಸಿಕೊಂಡಾಗ, ಸಂಸ್ಥೆಗಳನ್ನು ಭ್ರಷ್ಟಗೊಳಿಸಿದಾಗ, ರಾಜಾರೋಷವಾಗಿ ದ್ವೇಷವನ್ನು ಎತ್ತಿ ಹಿಡಿದಾಗ ಮುಕ್ತ ಜನರ, ಶಿಕ್ಷಣ ತಜ್ಞರ ಹಾಗೂ ಸರಕಾರದ ನಿಲುವಿಗೆ ವಿರುದ್ಧವಾದ ನಿಲುವನ್ನು ಹೊಂದಿದ ಎಲ್ಲರ ಬಾಯಿಯನ್ನು ಮುಚ್ಚಿಸಿದಾಗ ಅಥವಾ ಎಲ್ಲರನ್ನೂ ಬಲವಂತವಾಗಿ ವಿಧೇಯರನ್ನಾಗಿಸಿದಾಗ... ಒಂದು ಗಣರಾಜ್ಯ ಸಾಯುವುದು ಆಗ.

ಈಗ ದೇಶದ ಜನರ ಮನಸ್ಸಿನಲ್ಲಿ ಭಯದ ಬಿರುಗಾಳಿಯೊಂದು ಬೀಸುತ್ತಿದೆ, ನಾವು ಉಸಿರಾಡುವ ಗಾಳಿಯಲ್ಲಿ ಆತಂಕ, ಬಿಗಿತ ಕಾಣಿಸುತ್ತಿದೆ. ಸಾಮಾನ್ಯ ಪುರುಷರನ್ನು ಮಹಿಳೆಯರನ್ನು ನಾವು ಬಹಳ ಸಮಯದಿಂದ ನಮ್ಮ ಶತ್ರುಗಳಾಗಿ ಮಾಡಿಕೊಂಡಿದ್ದೇವೆ. ನಮ್ಮ ಸುಳ್ಳುಗಳನ್ನು ಮುಚ್ಚಿಡಲಿಕ್ಕಾಗಿ ಅಮಾಯಕರನ್ನು ಬೈಯುತ್ತಾ ಬಂದಿದ್ದೇವೆ. ಇವತ್ತು ಈ ಎಲ್ಲವನ್ನು ಧರ್ಮಗಳು ಮಾಡುತ್ತಿವೆ. ನಾಳೆ ಧರ್ಮಗಳ ಜಾಗದಲ್ಲಿ ಜಾತಿಗಳು ಮತ್ತು ಉಪಜಾತಿಗಳು ಈ ಪಾತ್ರಗಳನ್ನು ನಿರ್ವಹಿಸುತ್ತವೆ.

ಪ್ರಪಂಚ ಜನಾಂಗೀಯ ಹಿರಿಮೆಯಿಂದಾಗಿ ನಡೆದ ಹಲವಾರು ದುರಂತಗಳನ್ನು ಕಂಡಿದೆ. ಪರಧರ್ಮಗಳ ಹೀಯಾಳಿಕೆ ಮತ್ತು ಸಾಮೂಹಿಕ ದ್ವೇಷ ಜಾಗತಿಕ ಮಟ್ಟದಲ್ಲಿ ಲಕ್ಷಗಟ್ಟಲೆ ಜನರ ಕಗ್ಗೊಲೆಗೆ ಕಾರಣವಾಗಿದೆ. ಎರಡು ಮಹಾಯುದ್ಧಗಳು, ಇತಿಹಾಸದಲ್ಲಿ ನಡೆದಿರುವ ಹಲವು ನರಮೇಧಗಳು ಮತ್ತು ಜರ್ಮನಿಯಲ್ಲಿ ನಾಝಿಗಳು ನಡೆಸಿದ ಅಮಾನವೀಯ ಪಾಶವೀಕೃತ್ಯಗಳು ನಮ್ಮ ಮುಂದೆ ಸಾಕ್ಷಿಯಾಗಿ ನಿಂತಿವೆ.

ಭಾರತಕ್ಕೆ ಇಂತಹ ದ್ವೇಷದ ಆವಶ್ಯಕತೆ ಇಲ್ಲ. ಧಾರ್ಮಿಕ ಪ್ರತ್ಯೇಕತೆಯನ್ನು, ವಿಭಜನೆಯನ್ನು ಆಧರಿಸಿದ ಕಾನೂನುಗಳಿಗಿಂತ ಅವ್ಯಕ್ತದ ಭಯವಾದರೂ ಆಗಬಹುದು ಎನ್ನವ ಹಾಗೆ ಜನರು ಬೀದಿಗಿಳಿದಿದ್ದಾರೆ.

ಇದನ್ನು ತಿಳಿದಿರಿ. ಇದೆಲ್ಲ ಆರಂಭವಾಗುವುದು ಹೀಗೆ. ಇದು ಕೊನೆಗೊಳ್ಳುವುದೂ ಹೀಗೆ ಎಂಬುದನ್ನು ನಾವು ಕಂಡಿದ್ದೇವೆ. ಭವಿಷ್ಯ ನಮ್ಮನ್ನು ಪ್ರಶ್ನಿಸುತ್ತಿದೆ. ಒಂದು ಗಣರಾಜ್ಯ ಸತ್ತದ್ದು, ಸಾಯುವುದು ಹೀಗೆಯೇ? ಅಥವಾ ಒಂದು ಗಣರಾಜ್ಯವನ್ನು ರಕ್ಷಿಸುವ ರೀತಿ ಇದೇ ಏನು?

 ಕೃಪೆ: ಡೆಕ್ಕನ್ ಹೆರಾಲ್ಡ್

Writer - ಗಣೇಶ್ ಚಕ್ರವರ್ತಿ

contributor

Editor - ಗಣೇಶ್ ಚಕ್ರವರ್ತಿ

contributor

Similar News