24 ಗಂಟೆ ಕುಡಿಯುವ ನೀರು: ಆಪ್ ನಿಂದ 10 ಅಂಶಗಳ ಪ್ರಣಾಳಿಕೆ ಬಿಡುಗಡೆ
ಹೊಸದಿಲ್ಲಿ, ಜ. 19: ದಿಲ್ಲಿ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಉಚಿತ ವಿದ್ಯುತ್, ನಳ್ಳಿಯಲ್ಲಿ 24 ಗಂಟೆಗಳ ಕಾಲ ಕುಡಿಯುವ ನೀರು ಹಾಗೂ ಪ್ರತಿ ಮಗುವಿಗೂ ಜಾಗತಿಕ ಮಟ್ಟದ ಶಿಕ್ಷಣದ ಖಾತರಿ ಒಳಗೊಂಡ ‘10 ಅಂಶಗಳ ಗ್ಯಾರಂಟಿ ಕಾರ್ಡ್’ ಎಂದು ಕರೆಯಲಾಗುವ ಚುನಾವಣಾ ಪ್ರಣಾಳಿಕೆಯನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಿಡುಗಡೆಗೊಳಿಸಿದ್ದಾರೆ.
ಇದಲ್ಲದೆ ಯಮುನಾ ಸ್ವಚ್ಛತೆ ಸೇರಿದಂತೆ ಸ್ವಚ್ಛ ಪರಿಸರ, ಕೊಳಗೇರಿಯ ಪ್ರತಿ ನಿವಾಸಿಗಳಿಗೆ ಮನೆಯ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ‘‘ಇದು ನಮ್ಮ ಪ್ರಣಾಳಿಕೆ ಅಲ್ಲ. ಇದು ಎರಡು ಹೆಜ್ಜೆ ಮುಂದಿರಿಸಿರುವುದು. ಇದು ದಿಲ್ಲಿಯ ಜನರ ಮೇಲೆ ಪರಿಣಾಮ ಬೀರುವ ವಿಷಯಗಳು. ಈ ದಿಶೆಯಲ್ಲಿ ಪ್ರಣಾಳಿಕೆ ರೂಪಿಸಲಾಗಿದೆ.’’ ಎಂದು ಅರವಿಂದ ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ನೆರೆಯ ಕ್ಲಿನಿಕ್ ಮೂಲಕ ಉಚಿತ ಆರೋಗ್ಯ ಸೇವೆ ಹಾಗೂ ನಗರದ ಸರಕಾರಿ ಶಾಲೆಗಳನ್ನು ಪುನರುಜ್ಜೀವನಗೊಳಿಸುವುದು ಮೊದಲಾದ ಇತರ ಭರವಸೆಗಳನ್ನು ಕೂಡ ಆಪ್ ಚುನಾವಣಾ ಪ್ರಣಾಳಿಕೆ ಹೊಂದಿದೆ.