Wild Karnataka: ರಾಜ್ಯದ ಜೀವವೈವಿಧ್ಯ, ಪ್ರಕೃತಿಯ ಸೊಬಗಿನ ಅದ್ಭುತ ಚಿತ್ರಣ

Update: 2020-01-20 14:32 GMT

ಬೆಂಗಳೂರು: 'ಕರ್ನಾಟಕ ವಿಶ್ವದ ಅತ್ಯಂತ ಪ್ರಮುಖ ನಿರಾಶ್ರಿತ ವನ್ಯಜೀವಿಗಳ ತಾಣ' ಎಂದು ಡೇವಿಡ್ ಅಟೆನ್ಬರೊ 'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರದಲ್ಲಿ ಹೇಳುತ್ತಾರೆ. ಈಗಾಗಲೇ ಈ ಚಿತ್ರ ದೇಶದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಕರ್ನಾಟಕದ ಜೀವ ವೈವಿಧ್ಯ, ಮಳೆಕಾಡುಗಳು, ಪ್ರಕೃತಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ.

ಮುಂಗಾರು ಅಂತ್ಯದಲ್ಲಿ ಅಂದರೆ ಸೆಪ್ಟೆಂಬರ್ ಕೊನೆಗೆ ಆರಂಭವಾಗುವ ಈ ಸಾಕ್ಷ್ಯಚಿತ್ರ ಮುಂದಿನ ಮುಂಗಾರು ಆರಂಭವಾಗುವವರೆಗೆ ಅಂದರೆ ಅತ್ಯಂತ ಬಿಸಿಯ ವಾತಾವರಣದವರೆಗಿನ ಚಿತ್ರಣವನ್ನು ತೋರಿಸುತ್ತದೆ. ಇದು ಪಶ್ಚಿಮಘಟ್ಟದ ಮಳೆಕಾಡುಗಳಿಂದ ಹಿಡಿದು ಒಣ, ಕಲ್ಲುಬಂಡೆಗಳ ದಕ್ಖನ್ ಪ್ರಸ್ಥಭೂಮಿ, ಕಾಡುಗಳು ಹಾಗೂ ಜಲರಾಶಿಗಳಾದ ಸಾಗರ, ನದಿ, ಕೆರೆ, ಕಟ್ಟೆ ಹಾಗೂ ಜಲಪಾತಗಳನ್ನು ಒಳಗೊಂಡಿದೆ.

ಇಲ್ಲಿನ ರಮ್ಯ ಚಿತ್ರಣ ಮಾತ್ರ ಆಕರ್ಷಣೆಯಲ್ಲ. ಅಟೆನ್ಬರೊ ನಮ್ಮ ಮಾರ್ಗದರ್ಶಕನಂತೆ ಕರ್ನಾಟಕದ ನಂಬಲಸಾಧ್ಯ ವನ್ಯಜೀವಿಗಳ ಬಗ್ಗೆ ವಿವರಿಸುತ್ತಾರೆ. "ಪಶ್ಚಿಮಘಟ್ಟವು ಅತ್ಯಂತ ಸಮೃದ್ಧ ಜೀವವೈವಿಧ್ಯ ತಾಣವಾಗಿದ್ದು, ಇಲ್ಲಿ ಕಂಡುಬರುವ ಪ್ರಬೇಧಗಳ ಸಂಖ್ಯೆ ಭೂಮಿಯಲ್ಲೆಲ್ಲೂ ಕಂಡುಬರುವುದಿಲ್ಲ. ಇದು ಅಮೆಝಾನ್‍ ಗೆ ಪ್ರತಿಸ್ಪರ್ಧಿ" ಎಂದು ಅವರು ಬಣ್ಣಿಸುತ್ತಾರೆ. ಕರಡಿ, ಕಾಳಿಂಗ ಸರ್ಪ, ಕಪ್ಪೆ, ಹಾರ್ನ್‍ ಬಿಲ್, ಗ್ರೇ ಲಂಗರ್ಸ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಬೆಕ್ಕಿನ ಮರಿಯೊಂದು ನಾಗರಹಾವಿನ ಜತೆ ಹೋರಾಡುವುದು, ತನ್ನ ಪುಟ್ಟ ಮರಿಗಳನ್ನು ರಕ್ಷಿಸಲು ತಾಯಿ ಜಿಂಕೆಯ ಹೋರಾಟದಂಥ ವೈವಿಧ್ಯಮಯ ಹಾಗೂ ಅದ್ಭುತ ಅಂಶಗಳನ್ನು ಸಾಕ್ಷ್ಯಚಿತ್ರ ತೆರೆದಿಡುತ್ತದೆ. ನವಿಲುಗಳ ನರ್ತನ, ಕಪ್ಪೆಗಳು, ಹಲ್ಲಿಗಳಂಥ ಸರೀಸೃಪಗಳ ವೈವಿಧ್ಯತೆಯೂ ಇಲ್ಲಿದೆ.

ಡೇವಿಡ್ ಅಟೊನ್ಬರೊ ನಿರೂಪಣೆ ಇರುವ ಈ ಚಿತ್ರವನ್ನು ಅಮೋಘವರ್ಷ, ಕಲ್ಯಾಣ್ ವರ್ಮಾ, ಶರತ್ ಚಂಪತಿ ಮತ್ತು ವಿಜಯ್ ಮೋಹನ್ ರಾಜ್ ನಿರ್ದೇಶಿಸಿದ್ದಾರೆ. ಪ್ರತಿಷ್ಠಿತ 'ಗ್ರ್ಯಾಮಿ ಪ್ರಶಸ್ತಿ' ಪುರಸ್ಕೃತ ರಿಕ್ಕಿ ಕೇಜ್ ಈ ಚಿತ್ರದ ಸಂಗೀತ ನಿರ್ದೇಶಕರು.

'ವೈಲ್ಡ್ ಕರ್ನಾಟಕ' ಚಿತ್ರವನ್ನು ಪರದೆಯಲ್ಲಿ ಆಸ್ವಾದಿಸುವುದು ಅಪೂರ್ವ ಅನುಭವ. ಸಾಮಾನ್ಯವಾಗಿ ಇಂಥ ಸಾಕ್ಷ್ಯಚಿತ್ರಗಳನ್ನು ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ಸಿಗುವುದಿಲ್ಲ. ನೀವು ನೋಡದ ಕರ್ನಾಟಕದ ಜೀವವೈವಿಧ್ಯ, ಪ್ರಕೃತಿಯನ್ನು ಕಣ್ತುಂಬಿಕೊಳ್ಳಲು ಇಂದೇ ಚಿತ್ರಮಂದಿರಕ್ಕೆ ತೆರಳಿ.

'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರದ ಟ್ರೈಲರ್ ಈ ಕೆಳಗಿದೆ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News