ಜಮ್ಮು: ಮೂವರು ಉಗ್ರರ ಹತ್ಯೆ; ಮೃತ ಉಗ್ರರಲ್ಲಿ ಓರ್ವ ಮಾಜಿ ಪೊಲೀಸ್

Update: 2020-01-20 15:54 GMT

ಶ್ರೀನಗರ, ಜ.20: ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಹಿಜ್ಬುಲ್ ಮುಜಾಹಿದೀನ್ ಉಗ್ರರು ಹತರಾಗಿದ್ದಾರೆ. ಇವರಲ್ಲಿ ಓರ್ವ ಪೊಲೀಸ್ ಹುದ್ದೆ ತೊರೆದು ಉಗ್ರರ ಸಂಘಟನೆ ಸೇರಿದ ವ್ಯಕ್ತಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಶೋಫಿಯಾನ್ ಜಿಲ್ಲೆಯ ವಾಚ್ಚಿ ಪ್ರದೇಶದಲ್ಲಿ ಉಗ್ರರ ಚಲನವಲನದ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿದರು. ಉಗ್ರರ ಇರುವಿಕೆ ಖಚಿತಪಡಿಸಿಕೊಂಡು ಅವರಿಗೆ ಶರಣಾಗುವಂತೆ ಸೂಚಿಸಿದಾಗ ಅವರು ಭದ್ರತಾ ಪಡೆಗಳತ್ತ ಗುಂಡಿನ ದಾಳಿ ಆರಂಭಿಸಿದರು. ಭದ್ರತಾ ಪಡೆಗಳ ಪ್ರತಿದಾಳಿಯಲ್ಲಿ ಮೂವರು ಹತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೃತರಲ್ಲಿ ಒಬ್ಬನನ್ನು ಅದಿಲ್ ಅಹ್ಮದ್ ಎಂದು ಗುರುತಿಸಲಾಗಿದ್ದು, ವಿಶೇಷ ಪೊಲೀಸ್ ಅಧಿಕಾರಿಯಾಗಿದ್ದ ಈತ 2018ರಲ್ಲಿ ಆಗಿನ ಶಾಸಕ ಅಹ್ಮದ್ ಮೀರ್ ಅವರ ಸರಕಾರಿ ನಿವಾಸದಲ್ಲಿದ್ದ 7 ಎಕೆ ರೈಫಲ್‌ಗಳ ಸಹಿತ ನಾಪತ್ತೆಯಾಗಿದ್ದ. ಈತ ಉಗ್ರ ಸಂಘಟನೆ ಸೇರಿದ್ದಾನೆ ಎಂದು ವರದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News