ಸ್ಪೀಕರ್‌ಗಿರುವ ಶಾಸಕರ ಅನರ್ಹತೆ ಅಧಿಕಾರವನ್ನು ಮರುಪರಿಶೀಲಿಸಲು ಸಂಸತ್ತಿಗೆ ಸುಪ್ರೀಂ ಸಲಹೆ

Update: 2020-01-21 14:16 GMT

ಹೊಸದಿಲ್ಲಿ,ಜ.21: ಪಕ್ಷಾಂತರಗೊಂಡ ಶಾಸಕರನ್ನು ಅನರ್ಹಗೊಳಿಸುವ ಸ್ಪೀಕರ್ ಅಧಿಕಾರವನ್ನು ಪುನರ್‌ ಪರಿಶೀಲಿಸುವಂತೆ ಮಂಗಳವಾರ ಸಂಸತ್ತಿಗೆ ಸಲಹೆ ನೀಡಿದ ಸರ್ವೋಚ್ಚ ನ್ಯಾಯಾಲಯವು,ಸ್ಪೀಕರ್ ಕೂಡ ಒಂದಲ್ಲೊಂದು ರಾಜಕೀಯ ಪಕ್ಷಕ್ಕೆ ಸೇರಿದವರೇ ಆಗಿರುತ್ತಾರೆ ಎಂದು ಬೆಟ್ಟು ಮಾಡಿತು.

2017ನ ಮಾರ್ಚ್ ‌ನಲ್ಲಿ ಮಣಿಪುರ ವಿಧಾನಸಭಾ ಚುನಾವಣೆಯ ಬಳಿಕ ಎನ್.ಬಿರೇನ್ ಸಿಂಗ್ ನೇತೃತ್ವದ ಬಿಜೆಪಿಗೆ ಕಾಂಗ್ರೆಸ್ ಶಾಸಕ ಶ್ಯಾಮಕುಮಾರ್ ಅವರ ಸೇರ್ಪಡೆಗೆ ಸಂಬಂಧಿಸಿದ ತೀರ್ಪಿನಲ್ಲಿ ಸರ್ವೋಚ್ಛ ನ್ಯಾಯಾಲಯವು ಸಂಸತ್ತಿಗೆ ಈ ಸಲಹೆಯನ್ನು ನೀಡಿದೆ. ಪಕ್ಷಾಂತರ ನಿಗ್ರಹ ಕಾನೂನಿನಡಿ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಸ್ವತಂತ್ರ ವ್ಯವಸ್ಥೆಯೊಂದನ್ನು ರೂಪಿಸುವ ಬಗ್ಗೆಯೂ ಪರಿಶೀಲಿಸುವಂತೆ ನ್ಯಾ.ರೋಹಿಂಟನ್ ನಾರಿಮನ್ ನೇತೃತ್ವದ ಪೀಠವು ಸಂಸತ್ತಿಗೆ ಸೂಚಿಸಿತು.

ಪಕ್ಷಾಂತರ ನಿಗ್ರಹ ಕಾನೂನಿನಡಿ ನಾಲ್ಕು ವಾರಗಳಲ್ಲಿ ಶ್ಯಾಮಕುಮಾರ್ ಅವರ ಅನರ್ಹತೆಯ ಕುರಿತು ನಿರ್ಧರಿಸುವಂತೆ ಮಣಿಪುರ ವಿಧಾನಸಭಾ ಸ್ಪೀಕರ್‌ಗೆ ನಿರ್ದೇಶ ನೀಡಿದ ಪೀಠವು,ಸ್ಪೀಕರ್ ತನ್ನ ಸೂಚನೆಯನ್ನು ಪಾಲಿಸದಿದ್ದರೆ ಅರ್ಜಿದಾರರು ಮತ್ತೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಲು ಸ್ವತಂತ್ರರಾಗಿದ್ದಾರೆ ಎಂದೂ ಹೇಳಿತು.

  28 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಏಕೈಕ ದೊಡ್ಡಪಕ್ಷವಾಗಿ ಮೂಡಿ ಬಂದಿದ್ದ ಕಾಂಗ್ರೆಸ್‌ಗೆ 60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಬಹುಮತಕ್ಕೆ ಮೂರು ಸ್ಥಾನಗಳ ಕೊರತೆಯಿತ್ತು. 21 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯು ಎನ್‌ಪಿಎಫ್, ಎನ್‌ಪಿಪಿ ಮತ್ತು ಎಲ್‌ಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚನೆಗೆ ಹಕ್ಕು ಮಂಡಿಸಿತ್ತು. ಶ್ಯಾಮಕುಮಾರ್ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಎನ್.ಬಿರೇನ್ ಸಿಂಗ್ ಅವರು ಸಮ್ಮಿಶ್ರ ಸರಕಾರವನ್ನು ಸ್ಥಾಪಿಸಲು ನೆರವಾಗಿದ್ದರು. ಬಿಜೆಪಿ ಸರಕಾರದಲ್ಲಿ ಅವರನ್ನು ನಗರ ಯೋಜನೆ,ಅರಣ್ಯ ಮತ್ತು ಪರಿಸರ ಸಚಿವರನ್ನಾಗಿ ಮಾಡಲಾಗಿತ್ತು. ಅವರ ಅನರ್ಹತೆಯನ್ನು ಕೋರಿ ಕಾಂಗ್ರೆಸ್ ನಾಯಕರು ಸ್ಪೀಕರ್ ವೈ.ಖೇಮಚಂದ್ ಸಿಂಗ್ ಅವರಿಗೆ ಕನಿಷ್ಠ 13 ದೂರುಗಳನ್ನು ಸಲ್ಲಿಸಿದ್ದರು. ಆದರೆ ಸ್ಪೀಕರ್ ಈ ದೂರುಗಳ ಕುರಿತು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ.

ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಶಾಸಕರಾದ ಕೀಶಾಮ್ ಮೇಘಚಂದ್ರ ಮತ್ತು ಮುಹಮ್ಮದ್ ಫಜುರ್ ರಹೀಮ್ ಅವರು ಮಣಿಪುರ ಉಚ್ಚ ನ್ಯಾಯಲಯದ ಮೊರೆ ಹೋಗಿದ್ದರು. ಆದರೆ ಅಧಿಕಾರ ವ್ಯಾಪ್ತಿಯ ತಾಂತ್ರಿಕ ಕಾರಣವನ್ನು ನೀಡಿ ಯಾವುದೇ ಆದೇಶವನ್ನು ಹೊರಡಿಸಲು ನಿರಾಕರಿಸಿದ್ದ ಉಚ್ಚ ನ್ಯಾಯಾಲಯವು ಅವರ ಅರ್ಜಿಗಳನ್ನು ವಿಲೇವಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News