ತಾಲಿಬಾನ್ ಜತೆಗಿನ ಮಾತುಕತೆ : ಪೂರ್ವಷರತ್ತ ಕೈಬಿಡಲು ಹಮೀದ್ ಕರ್ಝಾಯಿ ಆಗ್ರಹ

Update: 2020-01-21 16:11 GMT

ಕಾಬುಲ್, ಜ.21: ತಾಲಿಬಾನ್ ಜೊತೆಗೆ ಸಭೆ ನಡೆಯಬೇಕಿದ್ದರೆ ಯುದ್ಧವಿರಾಮ ಘೋಷಿಸಬೇಕು ಎಂಬ ಷರತ್ತನ್ನು ಕೈಬಿಡುವಂತೆ ಅಪಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿಯನ್ನು ಮಾಜಿ ಅಧ್ಯಕ್ಷ ಹಮೀದ್ ಕರ್ಝಾಯಿ ಆಗ್ರಹಿಸಿದ್ದಾರೆ.

ಕದನ ವಿರಾಮದ ನೆಪದಲ್ಲಿ ಸರಕಾರ ಅಪಘಾನಿಸ್ತಾನಕ್ಕೆ ಸಂಬಂಧಿಸಿದ ಸಂವಾದವನ್ನು ತಡೆಯಬಾರದು. ಅಮೆರಿಕ ಮತ್ತು ತಾಲಿಬಾನ್ ನಿಯೋಗದ ನಡುವೆ ಒಂದು ವರ್ಷಕ್ಕೂ ಅಧಿಕ ಸಮಯದಿಂದ ನಡೆಯುತ್ತಿದ್ದ ರಹಸ್ಯ ಮಾತುಕತೆಯ ಹಿನ್ನೆಲೆಯಲ್ಲಿ ಇದೀಗ ಅಂತಿಮ ಒಪ್ಪಂದಕ್ಕೆ ಸಹಿ ಬೀಳುವ ನಿರೀಕ್ಷೆಯಿದೆ ಎಂದು ಬಿಬಿಸಿಯ ಜತೆಗಿನ ಸಂದರ್ಶನದ ಸಂದರ್ಭ ಕರ್ಝಾಯಿ ಹೇಳಿದ್ದಾರೆ.

  ಹಿಂಸಾಚಾರ ತಗ್ಗಿಸುವ ಬಗ್ಗೆ ತಾಲಿಬಾನ್ ಮುಂದಿಟ್ಟಿರುವ ಪ್ರಸ್ತಾವನೆಯನ್ನು ಅಧ್ಯಕ್ಷ ಘನಿ ಸ್ವೀಕರಿಸಬೇಕು. ಕತಾರ್‌ನಲ್ಲಿ ಅಮೆರಿಕದ ರಾಜತಂತ್ರಜ್ಞರೊಂದಿಗೆ ನಡೆಯುತ್ತಿರುವ ಮಾತುಕತೆ ಫಲಪ್ರದವಾಗಿದ್ದು ಈಗ ಒಪ್ಪಂದಕ್ಕೆ ಸಹಿ ಹಾಕುವ ಸಮಯ ಸನ್ನಿಹಿತವಾಗಿದೆ ಎಂಬ ತಾಲಿಬಾನ್ ಹೇಳಿಕೆ ಸ್ವಾಗತಾರ್ಹವಾಗಿದೆ ಎಂದು ಕರ್ಝಾಯಿ ಹೇಳಿದರು.

ಆದರೆ ಯಾವುದೇ ಮಾತುಕತೆ ಆರಂಭಕ್ಕೂ ಮುನ್ನ ಯುದ್ಧವಿರಾಮ ಘೋಷಣೆ ಅತ್ಯಗತ್ಯ ಎಂದು ಘನಿ ಪಟ್ಟು ಹಿಡಿದಿದ್ದಾರೆ. ಹಿಂಸಾಚಾರ ತಗ್ಗಿಸುವುದು ಸಾಮಾನ್ಯ ವಿಷಯವಾಗಿದೆ. ಅಪಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಂಡನಾಯಕರ ಮೇಲೆ ತನಗೆ ನಿಯಂತ್ರಣವಿದೆ ಎಂದು ತೋರಿಸಲು ತಾಲಿಬಾನ್‌ನ ರಾಜಕೀಯ ನಾಯಕರು ಈ ಹೇಳಿಕೆ ನೀಡಿದ್ದಾರೆ ಎಂಬುದು ಅಶ್ರಫ್ ಘನಿ ಅಭಿಪ್ರಾಯವಾಗಿದೆ.

  ಕತಾರ್‌ನಲ್ಲಿ ಜಲ್ಮಾಯ್ ಖಲೀಲ್‌ಜಾದ್ ನೇತೃತ್ವದ ಅಮೆರಿಕದ ರಾಜತಾಂತ್ರಿಕರು ಹಾಗೂ ತಾಲಿಬಾನ್ ಮುಖಂಡರ ನಿಯೋಗದ ಮಧ್ಯೆ ನಡೆದ ಹಲವು ಸುತ್ತಿನ ಮಾತುಕತೆಯ ಸಂದರ್ಭ ಘನಿ ಸರಕಾರವನ್ನು ದೂರವಿಡಲಾಗಿದೆ. ಅಲ್ಲದೆ ರಾಷ್ಟ್ರೀಯ ಒಕ್ಕೂಟ ಸರಕಾರದಲ್ಲಿ ಅಧ್ಯಕ್ಷ ಘನಿಯೊಂದಿಗೆ ಅಧಿಕಾರ ಹಂಚಿಕೊಂಡಿರುವ ಡಾ. ಅಬ್ದುಲ್ಲಾ ಅಬ್ದುಲ್ಲಾ ಹಿಂಸಾಚಾರ ತಗ್ಗಿಸುವ ಪ್ರಸ್ತಾವನೆಯನ್ನು ಸ್ವಾಗತಿಸಿದ್ದು ಸೋಮವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಅಧ್ಯಕ್ಷ ಘನಿಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಶಾಂತಿ ಎಂಬುದು ಒಬ್ಬ ವ್ಯಕ್ತಿಯ ಏಕಸ್ವಾಮ್ಯ ಅಥವಾ ಆಶಯವಾಗಿಲ್ಲ, ಇದು ಸಾಮೂಹಿಕ ಬಯಕೆಯಾಗಿದೆ. ಶಾಂತಿ ಪ್ರಕ್ರಿಯೆಯ ಕುರಿತು ನಿರ್ಧಾರ ಕೈಗೊಳ್ಳುವ ಹಕ್ಕು ಅಪಘಾನಿಸ್ತಾನದ ಜನತೆಗಿದೆ ಎಂದು ಅಬ್ದುಲ್ಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News