ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಿದ ಕೇರಳ ಪೊಲೀಸರು

Update: 2020-01-24 06:47 GMT

ಬೆಂಗಳೂರು : "ಮಲಪ್ಪುರಂನ ಕುಟ್ಟಿಪುರಂ ಪಂಚಾಯತ್‍ನ ಹಿಂದುಗಳು ಪೌರತ್ವ ತಿದ್ದುಪಡಿ ಕಾಯಿದೆ 2019 ಬೆಂಬಲಿಸಿದ್ದಾರೆಂಬ ಕಾರಣಕ್ಕೆ ಅವರಿಗೆ ನೀರು ಪೂರೈಕೆ ನಿರಾಕರಿಸಲಾಗಿದೆ, ಕೇರಳವು ಇನ್ನೊಂದು ಕಾಶ್ಮೀರವಾಗುವ ನಿಟ್ಟಿನಲ್ಲಿ ಪುಟ್ಟ ಹೆಜ್ಜೆಗಳನ್ನಿಡುತ್ತಿದೆ'' ಎಂದು ಟ್ವೀಟ್ ಮಾಡಿದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂಸದೆಯ ವಿರುದ್ಧ ಧರ್ಮ ಹಾಗೂ ಜಾತಿಯ ಆಧಾರದಲ್ಲಿ ವಿವಿಧ ಸಮುದಾಯಗಳ ನಡುವೆ ವೈರತ್ವ ಪ್ರೇರೇಪಿಸಿದ್ದಕ್ಕಾಗಿ ಐಪಿಸಿಯ ಸೆಕ್ಷನ್ 153(ಎ) ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಶೋಭಾ ಮಾಡಿದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾದ ನಂತರ ಮಲಪ್ಪುರಂ ಮೂಲದ ಸುಪ್ರೀಂ ಕೋರ್ಟ್ ವಕೀಲ ಸುಭಾಶ್ ಚಂದ್ರನ್ ಕೆ ಆರ್ ಪೊಲೀಸ್ ದೂರು ನೀಡಿ ಸಂಸದೆಯ ಟ್ವೀಟ್ ಕುಟ್ಟಿಪುರಂನ ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವುದು ಎಂದು ಆರೋಪಿಸಿದ್ದಾರೆ. 

ಪೊಲೀಸರ ಪ್ರಕಾರ ಕುಟ್ಟಿಪುರಂ ಕಳೆದ ಕೆಲ ತಿಂಗಳುಗಳಿಂದ ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದು ಜನರು ಸ್ಥಳೀಯ ನಿವಾಸಿಯೊಬ್ಬರ ಕೊಳವೆ ಬಾವಿಯ ನೀರನ್ನು ಬಳಸುತ್ತಿದ್ದರು. ಆದರೆ ಕೊಳವೆ ಬಾವಿ ನೀರನ್ನು ಕೃಷಿ ಉದ್ದೇಶಗಳಿಗೆ ಬಳಸಿದರೆ ವಿದ್ಯುತ್ ಸಂಪರ್ಕ ಕಡಿದು ಹಾಕಲಾಗುವುದು ಎಂದು ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ಎಚ್ಚರಿಕೆ ನೀಡಿದ ನಂತರ ಆ ವ್ಯಕ್ತಿ ನೀರು ಪಂಪ್ ಮಾಡುವುದನ್ನು ನಿಲ್ಲಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ,.

ಆದರೆ ಸ್ಥಳೀಯರಿಗೆ ನೀರು ಪೂರೈಕೆ ಮಾಡದೆ ವಂಚಿಸಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ಬಲಪಂಥೀಯ ಸಂಘಟನೆ ಸೇವಾ ಭಾರತಿ ಹರಡಿತ್ತು ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ ಪೊಲೀಸ್ ದೂರನ್ನು ಟೀಕಿಸಿ ಟ್ವೀಟ್ ಮಾಡಿರುವ ಶೋಭಾ “ದಲಿತ ಕುಟುಂಬಗಳಿಗೆ ಆಗಿರುವ ತಾರತಮ್ಯವನ್ನು ಸರಿಪಡಿಸುವ ಬದಲು ಅವರು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಡ ಸರಕಾರದ ತಾರತಮ್ಯಕಾರಿ ನೀತಿಯ ವಿರುದ್ಧ ಇಡೀ ಸಮಾಜ ಒಂದಾಗಬೇಕಿದೆ,'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News