“ನಿರುದ್ಯೋಗ, ಅರ್ಥವ್ಯವಸ್ಥೆಯ ಬಗ್ಗೆ ನೀವು ಮಾತನಾಡಿದರೆ ನಿಮ್ಮ ಚಾನೆಲ್ ಅವರು ಬಂದ್ ಮಾಡುತ್ತಾರೆ”

Update: 2020-01-24 12:48 GMT

ಹೊಸದಿಲ್ಲಿ : “ನಿರುದ್ಯೋಗದ ಕುರಿತಂತೆ ಮಾತನಾಡಲು ಇವರಿಗೆ ಧೈರ್ಯವಿಲ್ಲ, ದೇಶದ ಅರ್ಥವ್ಯವಸ್ಥೆಯ ಬಗ್ಗೆ ಮಾತನಾಡಲು ಇವರಿಗೆ ಧೈರ್ಯವಿಲ್ಲ. ಅವರು ಹಾಗೆ ಮಾಡದೇ ಇದ್ದರೆ ಅಧಿಕಾರದಲ್ಲಿರುವ ಪ್ರಬಲ ಜನರು ಇವರ ಚಾನೆಲ್ ಬಂದ್ ಮಾಡಿ ಬಿಡುತ್ತಾರೆ. ಇದೇ ಕಾರಣಕ್ಕೆ ಇವರು ಪ್ರತಿ ದಿನ 24 ಗಂಟೆಯೂ ಕೇವಲ ಹಿಂದು-ಮುಸಲ್ಮಾನ್ ಬಗ್ಗೆ ಮಾತನಾಡುತ್ತಿದ್ದಾರೆ,'' ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 'ಟೈಮ್ಸ್ ನೌ' ವಾಹಿನಿಯನ್ನು ಹಾಗೂ ಬಿಜೆಪಿಗೆ ಚಾಟಿ ಬೀಸಿದ ವೀಡಿಯೋ ವೈರಲ್ ಆಗಿದೆ.

'ಟೈಮ್ಸ್ ನೌ' ಆಯೋಜಿಸಿದ್ದ ‘ಟೌನ್ ಹಾಲ್ ವಿದ್ ಕೇಜ್ರಿವಾಲ್' ಕಾರ್ಯಕ್ರಮದಲ್ಲಿ ಮಾತನಾಡಿದ ನಿರೂಪಕ “ಕೇಜ್ರಿವಾಲ್ ಅವರ ಪಕ್ಷದ ಒಬ್ಬನೇ ಒಬ್ಬ ಪ್ರತಿನಿಧಿ ಶಾಹೀನ್‍ಬಾಗ್  ಪ್ರದೇಶದಲ್ಲಿ ಪ್ರತಿಭಟನಾನಿರತ ಮಹಿಳೆಯರ ಬಳಿ ಹೋಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದಾಗ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ವಿ ಗವರ್ನ್ ಸರ್'' “ನಾವು ಆಡಳಿತ ನೀಡುತ್ತಿದ್ದೇವೆ” ಎಂದು ಹೇಳುತ್ತಾ ಕೇಂದ್ರದ ಆಡಳಿತ ಬಿಜೆಪಿ ಪಕ್ಷದ ಸರಕಾರವನ್ನು ಹಾಗೂ 'ಟೈಮ್ಸ್ ನೌ' ವಾಹಿನಿಯನ್ನು ಹಿಗ್ಗಾ ಮುಗ್ಗಾ ಝಾಡಿಸಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ.

"ಈ ದೇಶ ಸಿಎಎ, ಎನ್‍ಆರ್‍ಸಿಯಿಂದ ಉದ್ಧಾರವಾಗುವುದಿಲ್ಲ'' ಎಂದು ಕೇಜ್ರಿವಾಲ್ ಆಕ್ರೋಶಭರಿತರಾಗಿ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

"ನಾವು ಆಡಳಿತ ನಡೆಸುತ್ತೇವೆ, ನಾವು ಶಾಲೆ, ಆಸ್ಪತ್ರೆ ನಡೆಸುತ್ತಿದ್ದೇವೆ, ರಸ್ತೆ ನಿರ್ಮಿಸಿದ್ದೇವೆ, ಸಿಸಿಟಿವಿ ಅಳವಡಿಸಿದ್ದೇವೆ. ದೇಶದಲ್ಲಿ ಉದ್ಯೋಗ ಸೃಷ್ಟಿಸಲು ವಿಫಲವಾಗಿರುವ ಅವರಿಗೆ ಆ ಬಗ್ಗೆ ಮಾತನಾಡಲು ಧೈರ್ಯವಿಲ್ಲ, ಅದಕ್ಕಾಗಿ ಅವರು ಸಿಎಎ, ಎನ್‍ಆರ್‍ಸಿ ವಿಚಾರ ಎತ್ತಿದ್ದಾರೆ. ಈ ದೇಶವನ್ನು ವಿಭಜಿಸಲು ಯತ್ನಿಸುತ್ತಿರುವವರ ಉದ್ದೇಶ ಈಡೇರುವುದಿಲ್ಲ. ಈ ದೇಶದ ಪ್ರತಿಯೊಂದು ಮಗುವಿಗೆ ಶಿಕ್ಷಣ ದೊರೆತಾಗ, ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆದಾಗ ಹಾಗೂ ಪ್ರತಿ ಗಲ್ಲಿ ಗಲ್ಲಿಗೂ ನೀರು, ವಿದ್ಯುಚ್ಛಕ್ತಿ ದೊರೆತಾಗ ಈ ದೇಶ ಅಭಿವೃದ್ಧಿಯಾಗುವುದು. ಈ ದೇಶ ಸಿಎಎ, ಎನ್‍ಆರ್‍ಸಿಯಿಂದ ಉದ್ಧಾರವಾಗುವುದಿಲ್ಲ, ಈ ದೇಶದ ಜನರು ಬುದ್ಧಿವಂತರು. ಅವರು ಬಿಜೆಪಿಯ ಉದ್ದೇಶಗಳಿಗೆ ತಣ್ಣೀರೆರಚುತ್ತಾರೆ,'' ಎಂದು ಕೇಜ್ರಿವಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News