ಆಕ್ಸ್‌ಫರ್ಡ್ ನಿಘಂಟಿನಲ್ಲಿ ಸ್ಥಾನ ಪಡೆದ ಆಧಾರ್,ಚಾವಲ್,ಶಾದಿ

Update: 2020-01-24 15:56 GMT

ಹೊಸದಿಲ್ಲಿ,ಜ.24: ಆಧಾರ್, ಚಾವಲ್,ಡಬ್ಬಾ, ಹರತಾಲ್ ಹಾಗೂ ಶಾದಿ ಸೇರಿದಂತೆ 26 ಹೊಸ ಭಾರತೀಯ ಮೂಲದ ಪದಗಳು ಆಕ್ಸ್‌ಫರ್ಡ್ ಇಂಗ್ಲೀಷ್ ನಿಘಂಟಿನ ನೂತನ ಆವೃತ್ತಿಯಲ್ಲಿ ಸೇರ್ಪಡೆಗೊಂಡಿವೆ.

  ‘ಆಕ್ಸ್‌ಫರ್ಡ್ ಅಡ್ವಾನ್ಸ್ಡ್ ಲರ್ನರ್ಸ್‌ ಡಿಕ್ಷನರಿಯ 10ನೇ ಆವೃತ್ತಿಯನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದ್ದು, ಅದರಲ್ಲಿ ಒಟ್ಟು 384 ಭಾರತೀಯ ಮೂಲದ ಪದಗಳು ಒಳಗೊಂಡಿವೆ. ಅಲ್ಲದೆ ಚಾಟ್‌ಬೊಟ್, ಫೇಕ್‌ನ್ಯೂಸ್ ಹಾಗೂ ಮೈಕ್ರೊಪ್ಲಾಸ್ಟಿಕ್‌ನಂತಹ ಸಾವಿರಕ್ಕೂ ಅಧಿಕ ನೂತನ ಪದಗಳನ್ನು ಸೇರ್ಪಡೆಗೊಳಿಸಲಾಗಿದೆ.

  ಹಲವಾರು ವರ್ಷಗಳಿಂದ ಆಂಗ್ಲಭಾಷೆಯಲ್ಲಿ ಆಗಿರುವ ಬದಲಾವಣೆಗಳು ಹಾಗೂ ಅದರ ವಿಕಸನದ ಬಗ್ಗೆ ಈ ನಿಘಂಟು ಗಮನಕೇಂದ್ರೀಕರಿಸಿದೆ. ನೂತನ ಆವೃತ್ತಿಯಲ್ಲಿ ಬಳಕೆಯಾದ ಭಾಷೆ ಹಾಗೂ ನೀಡಲಾದ ಉದಾಹರಣೆಗಳು ಪ್ರಸ್ತುತವಾಗಿರುವುದನ್ನು ಹಾಗೂ ನವೀಕೃತವಾಗಿರುವುದಾಗಿ ಅಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಪ್ರೆಸ್ (ಓಯುಪಿ) ತಿಳಿಸಿದೆ.

 ಆಕ್ಸ್‌ಫರ್ಡ್ ಆಂಗ್ಲ ನಿಘಂಟಿನ ನೂತನ ಆವೃತ್ತಿಯಲ್ಲಿ 26 ನೂತನ ಭಾರತೀಯ ಮೂಲದ ಪದಗಳಿದ್ದು, ಅವುಗಳಲ್ಲಿ 22 ಪದಗಳು ಮುದ್ರಿತ ಆವೃತ್ತಿಯಲ್ಲಿವೆ. ಉಳಿದ ನಾಲ್ಕು ನೂತನ ಪದಗಳು ಆನ್‌ಲೈನ್ ಆವೃತ್ತಿಯಲ್ಲಿ ಲಭ್ಯವಿದೆಯೆಂದು ಓಯುಪಿಯ ಆಡಳಿತ ನಿರ್ದೇಶಕಿ (ಶಿಕ್ಷಣ ವಿಭಾಗ) ಫಾತಿಮಾ ದಾಡಾ ತಿಳಿಸಿದ್ದಾರೆ.

ಈ ನಿಘಂಟಿನಲ್ಲಿರುವ ಇತರ ಕೆಲವು ಭಾರತೀಯ ಮೂಲದ ಆಂಗ್ಲ ಪದಗಳೆಂದರೆ ಆಂಟೀ, ಬಸ್‌ಸ್ಟಾಂಡ್, ಡೀಮ್ಡ್ ಯೂನಿವರ್ಸಿಟಿ, ಎಫ್‌ಐಆರ್, ನಾನ್‌ವೆಜ್, ರಿಡ್ರೆಸ್ಸಲ್, ಟೆಂಪೊ, ಟ್ಯೂಬ್‌ಲೈಟ್, ವೆಜ್ ಹಾಗೂ ವಿಡಿಯೋಗ್ರಾಫ್. ಕರೆಂಟ್ (ವಿದ್ಯುತ್), ಲೂಟರ್, ಲೂಟಿಂಗ್ ಹಾಗೂ ಉಪಜಿಲ್ಲಾ ನಿಘಂಟಿನ ಆನ್‌ಲೈನ್ ಆವೃತ್ತಿಯಲ್ಲಿ ಸ್ಥಾನಪಡೆದಿರುವ ನಾಲ್ಕು ನೂತನ ಭಾರತೀಯ ಮೂಲದ ಪದಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News