ಪೌರತ್ವ ಕಾಯ್ದೆ ಫಲಾನುಭವಿಗಳ ಮಾಹಿತಿಯಿಲ್ಲ: ಅಸ್ಸಾಂ ಮುಖ್ಯಮಂತ್ರಿ ಸೊನೊವಾಲ್

Update: 2020-01-24 17:07 GMT

ಗುವಾಹಟಿ, ಜ.24: ಪೌರತ್ವ ಕಾಯ್ದೆಯಿಂದ ರಾಜ್ಯದಲ್ಲಿ ಎಷ್ಟು ಮಂದಿಗೆ ಅನುಕೂಲವಾಗಲಿದೆ ಎಂಬ ಅಂಕಿಅಂಶ ಯಾರಲ್ಲೂ ಇಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಹೇಳಿರುವುದಾಗಿ ವರದಿಯಾಗಿದೆ. ಗುವಾಹಟಿಯಲ್ಲಿ ಬಿಜೆಪಿ ಯುವಮೋರ್ಚಾ ಆಯೋಜಿಸಿದ್ದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಮಾತನಾಡಿದ ಸೊನೊವಾಲ್, ನಿಜ ಹೇಳಬೇಕೆಂದರೆ ಪೌರತ್ವ ಕಾಯ್ದೆಯ ಫಲಾನುಭವಿಗಳ ಕುರಿತ ಅಂಕಿಅಂಶ ಯಾರಲ್ಲೂ ಇಲ್ಲ ಎಂದು ಹೇಳಿದರು. 

ಪೌರತ್ವ ಕಾಯ್ದೆಯ ಫಲಾನುಭವಿಗಳ ಕುರಿತು ಬಿಜೆಪಿ ಮುಖಂಡರು ವಿವಿಧ ಅಂಕಿಅಂಶ ನೀಡುತ್ತಿದ್ದಾರೆ. ಕಾಯ್ದೆಯಿಂದ ಅನುಕೂಲ ಪಡೆಯಲಿರುವ ನಿರಾಶ್ರಿತರ ಪ್ರಮಾಣ ಅತ್ಯಲ್ಪ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ರಂಜೀತ್‌ಕುಮಾರ್ ದಾಸ್ ಮತ್ತು ಮುಖ್ಯಮಂತ್ರಿ ಸೊನೊವಾಲ್ ಹೇಳುತ್ತಿದ್ದರೆ, ರಾಜ್ಯದ ವಿತ್ತ ಸಚಿವ ಹಿಮಂತಬಿಸ್ವ ಶರ್ಮ ಸುಮಾರು 3.5ಲಕ್ಷದಿಂದ 5 ಲಕ್ಷದಷ್ಟು ನಿರಾಶ್ರಿತರಿಗೆ ನೆರವಾಗಲಿದೆ ಎನ್ನುತ್ತಿದ್ದಾರೆ. ಈ ಗೊಂದಲ ಪರಿಹರಿಸಿ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ದಾಸ್, ಅತ್ಯಲ್ಪ ಪ್ರಮಾಣ ಎಂದು ನಾನು ಅಥವಾ ಸೊನೊವಾಲ್ ಹೇಳಿಲ್ಲ. ಸುಮಾರು 5 ಲಕ್ಷ ಎಂದು ಶರ್ಮ ಕೂಡಾ ಹೇಳಿಲ್ಲ. ಸುಮಾರು 5 ಲಕ್ಷ ಜನರಿಗೆ ಪೌರತ್ವ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಅವರು ಹೇಳಿದ್ದರು. ಅಸ್ಸಾಂನಲ್ಲಿರುವ 42 ಲಕ್ಷ ಬಿಜೆಪಿ ಸದಸ್ಯರು ತಮ್ಮನ್ನು ಅಸ್ಸಾಮೀಯರು ಅಥವಾ ಭಾರತೀಯರು ಎಂದು ಗುರುತಿಸಿಕೊಳ್ಳುವವರೆಗೆ ಯಾವುದೇ ವಿದೇಶಿಯರು ಅಸ್ಸಾಂಗೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News