ಕಾಶ್ಮೀರದಲ್ಲಿ 2ಜಿ ಮೊಬೈಲ್ ಇಂಟರ್‌ನೆಟ್ ಸೇವೆ ಪುನರಾರಂಭ

Update: 2020-01-25 06:15 GMT

 ಶ್ರೀನಗರ, ಜ.25: ಕಳೆದ ಐದಕ್ಕೂ ಅಧಿಕ ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಪೋಸ್ಟ್ ಪೇಯ್ಡ್ ಹಾಗೂ ಪ್ರೀಪೇಯ್ಡ್ ಫೋನ್‌ಗಳ 2ಜಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಕಾಶ್ಮೀರ ಕಣವೆಯಲ್ಲಿ ಶನಿವಾರದಿಂದ ಮತ್ತೆ ಆರಂಭಿಸಲಾಗಿದೆ. 301ಕ್ಕೂ ಅಧಿಕ ವೆಬ್‌ಸೈಟ್‌ಗಳ ಬಳಕೆಗೆ ಜಮ್ಮು-ಕಾಶ್ಮೀರ ಆಡಳಿತ ಅನುಮತಿ ನೀಡಿದೆ ಎಂದು ಅಧಿಕೃತ ಆದೇಶವೊಂದರಲ್ಲಿ ತಿಳಿಸಲಾಗಿದೆ.

ಜ.25ರಿಂದ 2 ಜಿ ವೇಗದ ಇಂಟರ್ನೆಟ್ ಮೊಬೈಲ್ ಫೋನ್‌ಗಳ ಸೇವೆ ಪುನರಾರಂಭವಾಗಲಿದೆ ಎಂದು ಜಮ್ಮು-ಕಾಶ್ಮೀರ ಆಡಳಿತದ ಗೃಹ ಇಲಾಖೆ ನೀಡಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಜಮ್ಮು-ಕಾಶ್ಮೀರದಲ್ಲಿ ದೀರ್ಘ ಸಮಯದಿಂದ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿರುವ ಕೇಂದ್ರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇಂಟರ್‌ನೆಟ್ ಸೇವೆ ಜನರ ಮೂಲಭೂತ ಹಕ್ಕು ಎಂದು ಉಚ್ಚನ್ಯಾಯಾಲಯ ಬಣ್ಣಿಸಿತ್ತು.

2019ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯವನ್ನು ರದ್ದುಪಡಿಸಿದ್ದ ಕೇಂದ್ರ ಸರಕಾರ ಕಣಿವೆ ರಾಜ್ಯದಲ್ಲಿ ಅಂತರ್ಜಾಲ ಸೇವೆಗಳು, ಸ್ಥಿರ ದೂರವಾಣಿ ಹಾಗೂ ಮೊಬೈಲ್ ಫೋನ್‌ಗಳ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಮೊಬೈಲ್ ಇಂಟರ್ನೆಟ್ ಹೊರತುಪಡಿಸಿ ಹೆಚ್ಚಿನೆಲ್ಲಾ ಸೇವೆಗಳನ್ನು ಜಮ್ಮುವಿನಲ್ಲಿ ವಾರದೊಳಗೆ ಮರುಸ್ಥಾಪಿಸಲಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News