ಎಲ್ಲಾ ಧರ್ಮೀಯರ ಸಮಾನ ರಕ್ಷಣೆಗೆ ಒತ್ತು ನೀಡಿ: ಕೇಂದ್ರ ಸರಕಾರಕ್ಕೆ ಅಮೆರಿಕ ರಾಜತಂತ್ರಜ್ಞರ ಆಗ್ರಹ

Update: 2020-01-25 16:07 GMT

ಹೊಸದಿಲ್ಲಿ, ಜ.25: ಭಾರತದಲ್ಲಿ ಪೌರತ್ವ ಕಾಯ್ದೆ ವಿಷಯದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಹಿನ್ನಲೆಯಲ್ಲಿ, ಕಾನೂನಿನ ಅಡಿಯಲ್ಲಿ ಎಲ್ಲಾ ಧರ್ಮದವರ ಸಮಾನ ರಕ್ಷಣೆಯ ಸಿದ್ಧಾಂತಕ್ಕೆ ಒತ್ತು ನೀಡುವಂತೆ ಭಾರತ ಸರಕಾರವನ್ನು ಅಮೆರಿಕದ ಪ್ರಮುಖ ರಾಜತಂತ್ರಜ್ಞರು ಆಗ್ರಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕಾಶ್ಮೀರದ 370ನೇ ವಿಧಿ ರದ್ದತಿಯ ಬಳಿಕ ಕಳೆದ ಆಗಸ್ಟ್‌ನಿಂದಲೂ ಯಾವುದೇ ಆರೋಪವಿಲ್ಲದೆ ಬಂಧನದಲ್ಲಿರುವ ರಾಜಕೀಯ ಮುಖಂಡರನ್ನು ಬಿಡುಗಡೆಗೊಳಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದಕ್ಷಿಣ ಮತ್ತು ಏಶ್ಯಕ್ಕಾಗಿನ ಪ್ರಧಾನ ಉಪಸಹಾಯಕ ವಿದೇಶ ಕಾರ್ಯದರ್ಶಿ ಆಲಿಸ್ ವೆಲ್ಸ್ , ಭಾರತದಲ್ಲಿ ನಡೆದಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸಂದರ್ಭ ತನಗೆ ಪೌರತ್ವ ಕಾಯ್ದೆ ವಿಷಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ದೊರಕಿದೆ. ಪೌರತ್ವ ಕಾಯ್ದೆ ಕುರಿತು ಸರಕಾರದ ಹೇಳಿಕೆ, ವಿಪಕ್ಷಗಳ ಆರೋಪ, ಬೀದಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ, ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಮೇಲ್ಮನವಿ ಇತ್ಯಾದಿಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಆದರೆ ಅಮೆರಿಕದ ನಿಲುವು ಸ್ಪಷ್ಟವಾಗಿದೆ. ಕಾನೂನಿನ ಅಡಿಯಲ್ಲಿ ಎಲ್ಲಾ ಧರ್ಮದವರ ಸಮಾನ ರಕ್ಷಣೆಯ ಸಿದ್ಧಾಂತಕ್ಕೆ ಭಾರತ ಒತ್ತು ನೀಡಬೇಕು ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿಗೆ ವಿದೇಶಿ ನಿಯೋಗದ ಭೇಟಿ ಒಂದು ಉಪಯುಕ್ತ ಕ್ರಮವಾಗಿದೆ. ಅಲ್ಲದೆ ಕಾಶ್ಮೀರದಲ್ಲಿ ಆಂಶಿಕವಾಗಿ ಇಂಟರ್‌ನೆಟ್ ವ್ಯವಸ್ಥೆಯ ಮರುಸ್ಥಾಪನೆ ಸಹಿತ ಕೆಲವು ಪೂರಕ ಬೆಳವಣಿಗೆ ನಡೆದಿರುವುದರಿಂದ ಸಂತಸವಾಗಿದೆ ಎಂದರು.

ಆದರೆ ಜಮ್ಮು ಮತ್ತು ಕಾಶ್ಮೀರಕ್ಕೆ ಅಮೆರಿಕದ ರಾಜತಂತ್ರಜ್ಞರಿಗೆ ನಿಯಮಿತವಾಗಿ ಭೇಟಿ ನೀಡಲು ಅವಕಾಶ ನೀಡಬೇಕು ಮತ್ತು ಬಂಧನದಲ್ಲಿರುವ ರಾಜಕೀಯ ಮುಖಂಡರನ್ನು ಬಿಡುಗಡೆಗೊಳಿಸಬೇಕು ಎಂದು ಆಲಿಸ್ ವೆಲ್ಸ್ ಒತ್ತಾಯಿಸಿದ್ದಾರೆ.

15 ದೇಶಗಳ ರಾಜತಂತ್ರಜ್ಞರನ್ನು ಒಳಗೊಂಡಿದ್ದ ನಿಯೋಗವು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ಕೇಂದ್ರ ಸರಕಾರ ಅನುಮತಿ ನೀಡಿತ್ತು. ಆದರೆ ಕಳೆದ ಆಗಸ್ಟ್‌ನಿಂದಲೂ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿಯನ್ನು ಭೇಟಿಯಾಗಲು ಅವಕಾಶ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News