ಭಾರತೀಯರಿಗೆ ಸಂವಿಧಾನದ ಬಗ್ಗೆ ಶಿಕ್ಷಣ ನೀಡಲು ಚರ್ಚ್‌ ಗಳಿಗೆ ಬಿಷಪ್‌ಗಳ ಕರೆ

Update: 2020-01-25 16:07 GMT

ಹೊಸದಿಲ್ಲಿ,ಜ.25: ಗಣತಂತ್ರ ದಿನವಾದ ರವಿವಾರದಿಂದ ಆರಂಭಿಸಿ ಸಂವಿಧಾನವನ್ನು ಉತ್ತೇಜಿಸುವಂತೆ ಮತ್ತು ಅದರ ಕುರಿತು ಜನರನ್ನು ಶಿಕ್ಷಿತರನ್ನಾಗಿಸುವಂತೆ ಭಾರತೀಯ ಕ್ಯಾಥೊಲಿಕ್ ಬಿಷಪ್‌ಗಳ ಸಮ್ಮೇಳನವು ದೇಶಾದ್ಯಂತ ಚರ್ಚ್‌ಗಳಿಗೆ ಕರೆ ನೀಡಿದೆ.

ಸಂವಿಧಾನದ ಬಗ್ಗೆ ಜನರಲ್ಲಿ ಅರಿವು ಮತ್ತು ಜ್ಞಾನವನ್ನು ಹೆಚ್ಚಿಸಲು ವರ್ಷವಿಡೀ ಕಾರ್ಯಕ್ರಮಗಳನ್ನು ನಡೆಯಲಿವೆ ಎಂದು ಬಾಂಬೆ ಡಯಾಸಿಸ್‌ನ ವಕ್ತಾರ ಫಾ.ನಿಗೆಲ್ ಬ್ಯಾರೆಟ್ ಅವರು ಶನಿವಾರ ಸುದ್ದಿಸಂಸ್ಥೆಗೆ ತಿಳಿಸಿದರು.

 ಜ.26ನ್ನು ಸಂವಿಧಾನ ರಕ್ಷಣಾ ದಿನವೆಂದು ಘೋಷಿಸಲು ಭಾರತದ ಕ್ಯಾಥೊಲಿಕ್ ಚರ್ಚ್ ಉದ್ದೇಶಿಸಿದೆ ಮತ್ತು ರವಿವಾರದ ಸಾಮೂಹಿಕ ವಿಶೇಷ ಪ್ರಾರ್ಥನೆಗಳ ಬಳಿಕ ಸಂವಿಧಾನದ ಪೀಠಿಕೆಯನ್ನು ಓದುವಂತೆ ಆಗ್ರಹಿಸಿದೆ. ಸಿಎಎ ವಿರುದ್ಧ ಪ್ರತಿಭಟನೆಗಳಲ್ಲಿ ತಾನು ಪಾಲ್ಗೊಳ್ಳುವುದಾಗಿಯೂ ಚರ್ಚ್ ತಿಳಿಸಿದೆ. ರವಿವಾರ ಸಂವಿಧಾನ ಪೀಠಿಕೆಯನ್ನು ಓದುವಂತೆ ಮತ್ತು ಅದರ ರಕ್ಷಣೆಗೆ ಪಣ ತೊಡುವಂತೆ ಕೇರಳದ ಕೊಲ್ಲಂ ಬಿಷಪ್ ಪಾಲ್ ಆ್ಯಂಟನಿ ಮುಳ್ಳಶ್ಶೇರಿ ಅವರು ತನ್ನ ಡಯಾಸಿಸ್ ಅಧೀನದ ಎಲ್ಲ ಪ್ಯಾರಿಷ್‌ಗಳು ಮತ್ತು ಕ್ಯಾಥೊಲಿಕ್ ಸಂಘಟನೆಗಳಿಗೆ ಪತ್ರ ಬರೆದಿದ್ದಾರೆ.

ದೇಶವು ಅಭೂತಪೂರ್ವ ಸಾಮಾಜಿಕ ಸ್ಥಿತಿಯ ಮೂಲಕ ಸಾಗುತ್ತಿದೆ. ಸಂವಿಧಾನಕ್ಕೆ ಮುತ್ತಿಟ್ಟು ಅಧಿಕಾರ ಸ್ವೀಕರಿಸಿದ್ದ ಪ್ರಧಾನಿ ಈ ದೇಶಕ್ಕಾಗಿ ಸಂವಿಧಾನವು ಒದಗಿಸಿರುವ ವೌಲ್ಯಗಳನ್ನು ಉಲ್ಲಂಘಿಸುವ ಪ್ರಯತ್ನಗಳ ನೇತೃತ್ವವನ್ನು ವಹಿಸಿದ್ದಾರೆ. ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆಯು ಈ ಉಲ್ಲಂಘನೆಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ. ಸಿಎಎ ವ್ಯಾಪ್ತಿಯಿಂದ ಒಂದು ನಿರ್ದಿಷ್ಟ ಸಮುದಾಯವನ್ನು ಹೊರಗಿಟ್ಟಿರುವುದನ್ನು ನಾವು ಬಲವಾಗಿ ವಿರೋಧಿಸಬೇಕು ಎಂದು ಕೋಲ್ಕತಾದ ಆರ್ಚ್‌ಬಿಷಪ್ ಥಾಮಸ್ ಡಿಸೋಜಾ ಹೇಳಿದರು.

ರವಿವಾರ ಕೋಲ್ಕತಾದಲ್ಲಿ ಸಿಎಎ ವಿರುದ್ಧ ಹಮ್ಮಿಕೊಂಡಿರುವ ಮಾನವ ಸರಪಳಿಯಲ್ಲಿ ಭಾಗಿಯಾಗುವಂತೆ ಅವರು ಕ್ರೈಸ್ತ ಸಮುದಾಯವನ್ನು ಕೋರಿಕೊಂಡರು.

ಶುಕ್ರವಾರ ಚರ್ಚ್ ಬೆಂಬಲಿತ ಪ್ರಥಮ ಸಿಎಎ ವಿರುದ್ಧ ಪ್ರತಿಭಟನೆ ಗೋವಾದಲ್ಲಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News