ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ತರಬೇತಿ ನೀಡಿದ್ದ ‘ಬಾಂಬ್ ತಜ್ಞ’ನ ಬಂಧನ

Update: 2020-01-25 16:10 GMT

ಹೊಸದಿಲ್ಲಿ, ಜ.26: ಸ್ಫೋಟಕಗಳ ತಯಾರಿಯಲ್ಲಿ ಕೇಸರಿ ಉಗ್ರರಿಗೆ ತರಬೇತಿ ನೀಡಿದ್ದನೆನ್ನಲಾದ ಪಶ್ಚಿಮ ಬಂಗಾಳದ ನಿವಾಸಿ ಪ್ರತಾಪ್ ಹಾಝ್ರನನ್ನು ಮಹಾರಾಷ್ಟ್ರದ ಭಯೋತ್ಪಾದನ ನಿಗ್ರಹ ದಳ (ಎಟಿಎಸ್) ಗುರುವಾರ ಬಂಧಿಸಿದೆ ಎಂದು thewire.in ವರದಿ ಮಾಡಿದೆ. ಆತನಿಂದ ತರಬೇತಿ ಪಡೆದವರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ಆರೋಪಿಗಳೂ ಕೂಡಾ ಸೇರಿದ್ದಾರೆಂದು ವರದಿ ತಿಳಿಸಿದೆ.

2018ರ ನಲಸಪೋರಾದಲ್ಲಿ ಶಸ್ತ್ರಾಸ್ತ್ರ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಪ್ರತಾಪ್ ಹಾಝ್ರ ವಿರುದ್ಧ 2018ರ ಆಗಸ್ಟ್ 10ರಂದು ಪ್ರಕರಣ ದಾಖಲಾಗಿತ್ತು. ಆ ಬಳಿಕ ಆತ ತಲೆಮರೆಸಿಕೊಂಡಿದ್ದ. ಆತನನ್ನು ಪಶ್ಚಿಮಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಉಷ್ಟಿ ಎಂಬಲ್ಲಿಂದ ಬಂಧಿಸಲಾಗಿದೆ.

ನಲಸೋಪಾರದ ಅಕ್ರಮ ಶಸ್ತ್ರಾಸ್ತ್ರ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಎಟಿಎಸ್ ಪೊಲೀಸರು ನಲಸೋಪಾರದ ವೈಭವ ರಾವತ್, ಪುಣೆಯ ಸುಧನ್ವ ಗೊಂದಲೆಕರ್ ಹಾಗೂ ಔರಂಗಾಬಾದ್‌ ನ ಶರದ್ ಕಾಲಸ್ಕರ್ ಸೇರಿದಂತೆ 12 ಮಂದಿಯನ್ನು 2018ರ ಆಗಸ್ಟ್‌ನಲ್ಲಿ ಬಂಧಿಸಿದ್ದರು. ಮುಂಬೈ ಸಮೀಪದ ನಾಲಸ್‌ ಪೋರಾದಲ್ಲಿರುವ ವೈಭವ್ ರಾವತ್‌ ನ ನಿವಾಸ ಹಾಗೂ ಗೋದಾಮಿನಿಂದ ಕಚ್ಚಾಬಾಂಬ್‌ ಗಳು, ಸ್ಫೋಟಕಗಳು, ನಾಡಪಿಸ್ತೂಲ್‌ ಗಳು ಹಾಗೂ ಚಾಕುಗಳನ್ನು ಎಟಿಎಸ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ವೈಭವರಾವತ್ ಹಿಂದೂ ಗೋವಂಶ ರಕ್ಷಾ ಸಮಿತಿಯ ಕಾರ್ಯಕರ್ತನಾಗಿದ್ದನೆಂದು ಎಟಿಎಸ್ ಪೊಲೀಸರು ತಿಳಿಸಿದ್ದಾರೆ.

ಬಂಧಿತರೆಲ್ಲರೂ ಸನಾತನ ಸಂಸ್ಥಾ ಹಾಗೂ ಹಿಂದೂಜಾಗರಣಾ ಸಂಸ್ಥೆಯ ಜೊತೆ ನೇರವಾದ ಸಂಬಂಧವನ್ನು ಹೊಂದಿದ್ದಾರೆಂದು ಎಟಿಎಸ್ ಅಧಿಕಾರಿಗಳು newindianexpress.comಗೆ ತಿಳಿಸಿದ್ದಾರೆಂದು Thewire.in ವರದಿ ಮಾಡಿದೆ. ಆರೋಪಿಗಳಿಗೆ ಸ್ಫೋಟಕಗಳನ್ನು ತಯಾರಿಸಲು ತರಬೇತಿ ನೀಡಿದವರಲ್ಲಿ ಹಝ್ರಾ ಕೂಡಾ ಒಬ್ಬನೆಂದು ಅವರು ಹೇಳಿದ್ದಾರೆ.

ಈ ಗುಂಪು ಕೆಲವು ಚಿಂತಕರನ್ನು ಹತ್ಯೆಗೈಯಲು ಹಾಗೂ ಮಹಾರಾಷ್ಟ್ರದಾದ್ಯಂತ  ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಲು ಮತ್ತು ವಿಶೇಷವಾಗಿ ಹಿಂದೂಧರ್ಮದ ವಿರುದ್ಧ ಮಾತನಾಡುವ, ಬರೆಯುವ ಹಾಗೂ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಗುರಿಯಿರಿಸಲು ಸಂಚು ಹೂಡಿತ್ತೆನ್ನಲಾಗಿದೆ.

ಉಗ್ರಗಾಮಿ ಗುಂಪು ಭವಾನಿಸೇನಾದ ಜೊತೆ ಹಝ್ರಾ ನಂಟು ಹೊಂದಿದ್ದನೆನ್ನಲಾಗಿದೆ ಎಂದು thewire.in ವರದಿ ತಿಳಿಸಿದೆ. ಆತ 2017ರಲ್ಲಿ ಪುಣೆಯಲ್ಲಿ ನಡೆದ ಸನ್‌ ಬರ್ನ್ ಸಂಗೀತೋತ್ಸವ ಕಾರ್ಯಕ್ರಮದ ಮೇಲೆ ಬಾಂಬ್ ದಾಳಿ ನಡೆಸಲು ಸಂಚು ನಡೆಸಿದ್ದನೆಂದು ಆರೋಪಿಸಲಾಗಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಶಂಕಿತ ಆರೋಪಿ ಕೂಡಾ ಹಝ್ರಾ 2015ರಲ್ಲಿ ಮಂಗಳೂರಿನಲ್ಲಿ ನಡೆಸಿದ ಶಿಬಿರವೊಂದರಲ್ಲಿ ಬಾಂಬ್ ತಯಾರಿಗೆ ಅತಿಥಿ ತರಬೇತುದಾರನಾಗಿ ಭಾಗವಹಿಸಿದ್ದನೆಂದು ಪೊಲೀಸರಿಗೆ ತಿಳಿಸಿದ್ದ.

ಬಾಂಬ್ ತಯಾರಿ ತರಬೇತಿ ಶಿಬಿರದಲ್ಲಿ ಅತಿಥಿ ತರಬೇತುದಾರರಾಗಿ ಬಂದಿದ್ದವರಲ್ಲಿ ಹಝ್ರಾ ಕೂಡಾ ಇದ್ದನೆಂದು ಗೌರಿ ಲಂಕೇಶ್ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳು ಹಾಗೂ ಸಾಕ್ಷಿಗಳು ಮಾಹಿತಿ ನೀಡಿದ್ದರಿಂದ ಆತನ ಹೆಸರು ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News