ಗುಜರಾತ್ ಸೆಂಟ್ರಲ್ ವಿವಿ ಚುನಾವಣೆ: ಶೂನ್ಯಕ್ಕಿಳಿದ ಎಬಿವಿಪಿಗೆ ಭಾರೀ ಮುಖಭಂಗ

Update: 2020-01-25 17:38 GMT

ಗಾಂಧೀನಗರ, ಜ.25: ಗುಜರಾತ್ ಸೆಂಟ್ರಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಮಿತಿಯ 5 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಡಪಂಥೀಯ ವಿದ್ಯಾರ್ಥಿಗಳು ಬಹುಮತ ಗಳಿಸಿದ್ದರೆ ಎಬಿವಿಪಿ ಒಂದೂ ಸ್ಥಾನ ಗೆಲ್ಲಲು ವಿಫಲವಾಗಿ ಭಾರೀ ಮುಖಭಂಗಕ್ಕೆ ಒಳಗಾಗಿದೆ.

ಸ್ಕೂಲ್ ಆಫ್ ಲಾಂಗ್ವೇಜ್, ಇಂಟರ್‌ನ್ಯಾಷನಲ್ ರಿಲೇಷನ್ಸ್, ಲೈಬ್ರೆರಿ ಸೈಯನ್ಸ್, ಎನ್‌ವಯರ್ನ್‌ಮೆಂಟಲ್ ಮತ್ತು ಸೋಷಿಯಲ್ ಸೈಯನ್ಸ್- ಈ 5 ಸಮಿತಿಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿರ್ಸ ಅಂಬೇಡ್ಕರ್ ಫುಲೆ ಸ್ಟೂಡೆಂಟ್ಸ್ ಅಸೋಸಿಯೇಷನ್, ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ ಮತ್ತು ಲೆಫ್ಟ್ ಡೆಮೊಕ್ರಾಟಿಕ್ ಸ್ಟೂಡೆಂಟ್ಸ್ ಫೆಡರೇಶನ್ ತಲಾ ಒಂದು ಸ್ಥಾನದಲ್ಲಿ ಜಯ ಸಾಧಿಸಿದೆ. ಎನ್‌ಎಸ್‌ಯುಐ ಸಂಘಟನೆಯ ಒಬ್ಬ ವಿದ್ಯಾರ್ಥಿ ಹಾಗೂ ಒಬ್ಬ ಪಕ್ಷೇತರ ವಿದ್ಯಾರ್ಥಿ ಗೆಲುವು ದಾಖಲಿಸಿದ್ದರೆ ಕಳೆದ ಮೂರು ವರ್ಷಗಳಿಂದ ಸತತವಾಗಿ ಗೆಲುವು ದಾಖಲಿಸುತ್ತಿದ್ದ ಎಬಿವಿಪಿ ವಿದ್ಯಾರ್ಥಿಗಳು ಈ ಬಾರಿ ಒಂದೂ ಸ್ಥಾನ ಗೆಲ್ಲಲು ವಿಫಲವಾಗಿದ್ದಾರೆ.

  ವಿವಿಯ ನಿಯಮವನ್ನು ಆಡಳಿತ ಮಂಡಳಿಯೇ ಉಲ್ಲಂಘಿಸಿ ಚುನಾವಣೆಯಲ್ಲಿ ಎಡಸಂಘಟನೆಗಳ ವಿದ್ಯಾರ್ಥಿಗಳು ಗೆಲುವು ಸಾಧಿಸಲು ನೆರವಾಗಿದೆ ಎಂದು ಎಬಿವಿಪಿ ಆರೋಪಿಸಿದೆ. ಜನವರಿ 22ರಂದು ನಡೆದ ಚುನಾವಣೆ ಸಂದರ್ಭ ವಿವಿಗೆ ರಜೆ ಘೋಷಿಸಬೇಕಿತ್ತು. ಆದರೆ ಅಂದು ಪ್ರಯೋಗಾಲಯ ಹಾಗೂ ಇತರ ವಿಭಾಗಗಳು ಕಾರ್ಯಾಚರಿಸಿದ್ದು ವಿದ್ಯಾರ್ಥಿಗಳು ಮತ ಚಲಾಯಿಸಲು ಅವಕಾಶ ನೀಡಿಲ್ಲ ಎಂದು ಎಬಿವಿಪಿ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News