ಸಂಘ ಪರಿವಾರದ ಹೊಸ ತಂತ್ರ ಮೋದಿ-ಶಿವಾಜಿ ಹೋಲಿಕೆ!

Update: 2020-01-25 18:17 GMT

ಬಿಜೆಪಿಯ ಜಯಭಗವಾನ್ ಗೋಯಲ್ ಅವರಂತಹವರು ಇಂತಹ ಪ್ರಯತ್ನಗಳ ಮೂಲಕ ಎರಡು ಸಂದೇಶಗಳನ್ನು ನೀಡಲು ಯತ್ನಿಸುತ್ತಿದ್ದಾರೆ. ಒಂದೆಡೆ ಅವರು ಶಿವಾಜಿಯನ್ನು ಮುಸ್ಲಿಮ್ ವಿರೋಧಿಯಾಗಿ ಹಾಗೂ ಬ್ರಾಹ್ಮಣ್ಯವಾದದ ಬಣ್ಣದೊಂದಿಗೆ ಚಿತ್ರಿಸಲು ಬಯಸುತ್ತಿದ್ದಾರೆ. ಮೋದಿ ಈಗ ಮಾಡುತ್ತಿರುವುದಕ್ಕೂ, ಶಿವಾಜಿಯ ಸಾಧನೆಗೂ ಸಾಮ್ಯತೆಯಿದೆಯೆಂಬ ಸೂಕ್ಷ್ಮವಾದ ಸಂದೇಶವನ್ನು ನೀಡಲು ಬಯಸುತ್ತಿದ್ದಾರೆ. ಬಿಜೆಪಿಯೇತರ ಶಕ್ತಿಗಳು ಈ ಆಟವನ್ನು ಅರ್ಥಮಾಡಿಕೊಂಡಿದ್ದಾರೆ.


ಶಿವಾಜಿ ಮಹಾರಾಷ್ಟ್ರದ ಮಹಾನ್ ವ್ಯಕ್ತಿತ್ವವಾಗಿದ್ದಾರೆ. ಸಮಾಜದ ವಿವಿಧ ವರ್ಗಗಳು ವಿವಿಧ ಕಾರಣಗಳಿಗಾಗಿ ಈ ಮರಾಠಾ ದೊರೆಗೆ ಅತ್ಯುನ್ನತವಾದ ಗೌರವ ನೀಡುತ್ತಿವೆ. ಆತನ ಕುರಿತಾಗಿ ಲೆಕ್ಕವಿಲ್ಲದಷ್ಟು ಜಾನಪದ ಕಥೆಗಳು ಮಹಾರಾಷ್ಟ್ರದಲ್ಲಿ ಪ್ರಚಲಿತದಲ್ಲಿವೆ. ಹಲವಾರು ಜಾನಪದ ಲಾವಣಿ(ಪೊವ್ಞಾ) ಹಾಡುಗಳು ಶಿವಾಜಿಯ ವಿವಿಧ ಸಾಧನೆಗಳ ಗುಣಗಾನ ಮಾಡುತ್ತವೆ. ಹೀಗಾಗಿ, ಜಯಭಗವಾನ್ ಗೋಯಲ್ ಅವರು ತನ್ನ ಕೃತಿ ‘ಆಜ್ ಕಾ ಶಿವಾಜಿ: ನರೇಂದ್ರ ಮೋದಿ’ ಎಂಬ ಕೃತಿಯನ್ನು ದಿಲ್ಲಿಯಲ್ಲಿ ಬಿಜೆಪಿ ಪ್ರಾಯೋಜಿಸಿದ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದಾಗ ಮಹಾರಾಷ್ಟ್ರದಲ್ಲಿ ವ್ಯಾಪಕ ಅಸಮಾಧಾನ ಉಂಟಾಗಿತ್ತು. ಮಹಾರಾಷ್ಟ್ರದ ವಿವಿಧ ನಾಯಕರು ಈ ಪುಸ್ತಕದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಶಿವಸೇನೆಯ ನಾಯಕ ಸಂಜಯ್ ರಾವತ್ ಅವರು ಬಿಜೆಪಿಗೆ ಸೇರಿರುವ ಶಿವಾಜಿಯ ವಂಶಸ್ಥ ಹಾಲಿ ರಾಜ್ಯಸಭಾ ಸದಸ್ಯರೂ ಆದ ಸಾಂಭಾಜಿ ರಾಜೆಗೆ ಈ ವಿವಾದಕ್ಕೆ ಸಂಬಂಧಿಸಿ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಂಭಾಜಿ, ‘‘ಎರಡನೇ ಬಾರಿಗೆ ಭಾರತದ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರ ಮೋದಿಯವರನ್ನು ನಾವು ಗೌರವಿಸುತ್ತೇವೆ. ಆದರೆ ಮೋದಿಯಾಗಲಿ ಅಥವಾ ಜಗತ್ತಿನ ಇನ್ನಾರನ್ನೇ ಆಗಲಿ ಛತ್ರಪತಿ ಶಿವಾಜಿ ಮಹಾರಾಜರ ಜೊತೆ ಹೋಲಿಕೆ ಮಾಡುವುದು ಸಾಧ್ಯವಿಲ್ಲವೆಂದು ಹೇಳಿದ್ದರು.

 ಎನ್‌ಸಿಪಿಯ ಜಿತೇಂದ್ರ ಅವ್ಹಾದ್ ಕೂಡಾ ಮೋದಿ ಹಾಗೂ ಬಿಜೆಪಿಯು ಮಹಾರಾಷ್ಟ್ರದ ಘನತೆಗೆ ಅಪಮಾನವೆಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಕಾಲೀನ ಯುಗದ ಯುದ್ಧವೀರನಾದ ಶಿವಾಜಿಗೆ ಸಂಬಂಧಿಸಿ ವಿವಾದ ಭುಗಿಲೆದ್ದಿರುವುದು ಇದು ಮೊದಲ ಸಲವೇನೂ ಅಲ್ಲ. ಈ ಮೊದಲು, ಜೇಮ್ಸ್ ಲೈನೆ ಎಂಬವರು ಬರೆದ ‘ಶಿವಾಜಿ: ಹಿಂದೂ ಕಿಂಗ್ ಇನ್ ಆನ್ ಇಸ್ಲಾಮಿಕ್ ಕಿಂಗ್‌ಡಂ’ ಕೃತಿಯು ಆಕ್ಷೇಪಾರ್ಹ ವಿಷಯಗಳನ್ನು ಹೊಂದಿರುವುದರಿಂದ ಅದನ್ನು ನಿಷೇಧಿಸಬೇಕೆಂದು ಸಾಂಭಾಜಿ ಬ್ರಿಗೇಡ್ ಎಂಬ ಸಂಘಟನೆ ಚಳವಳಿ ನಡೆಸಿರುವುದನ್ನು ನಾವು ಕಂಡಿದ್ದೇವೆ. ಜೇಮ್ಸ್ ಲೈನೆ ಅವರ ಸಂಶೋಧನೆಗೆ ನೆರವಾಗಿದ್ದ ಪುಣೆಯ ಭಂಡಾರ್ಕರ್ ಇನ್‌ಸ್ಟಿಟ್ಯೂಟ್ ಮೇಲೆ ದಾಳಿ ನಡೆಸಿ, ಹಾನಿಯುಂಟು ಮಾಡಿದ್ದರು. ಇನ್ನೊಂದು ಹಂತದಲ್ಲಿ ಶಿವಾಜಿಯ ಬೃಹತ್ ಪ್ರತಿಮೆಯ ನಿರ್ಮಾಣ ಸಮಿತಿಗೆ ಬ್ರಾಹ್ಮಣ ಸಮುದಾಯದ ಬಾಬಾಸಾಹೇಬ್ ಪುರಂದರೆ ಅವರನ್ನು ನೇಮಕ ಮಾಡುವ ಪ್ರಸ್ತಾವವಾಗಿತ್ತು. ಆಗ ಮಹಾರಾಷ್ಟ್ರ ಮಹಾಸಂಘ ಹಾಗೂ ಶಿವ ಧರ್ಮ ಸಂಘಟನೆಯ ಮುಖಂಡರು ಮರಾಠಾ ದೊರೆಯ ಪ್ರತಿಮೆ ನಿರ್ಮಾಣ ಸಮಿತಿಯ ನೇತೃತ್ವವನ್ನು ಬ್ರಾಹ್ಮಣನೊಬ್ಬ ವಹಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಹೀಗೆ ಕಳೆದ ಕೆಲವು ಸಮಯದಿಂದ ಶಿವಾಜಿಯನ್ನು ಜಾತಿ ದೃಷ್ಟಿಕೋನದಿಂದ ನೋಡುವ ಪ್ರಕರಣಗಳು ಮುಂಚೂಣಿಗೆ ಬರುತ್ತಿವೆ.
ಶಿವಾಜಿಯನ್ನು ಸುತ್ತುವರಿದಿರುವ ವಿವಾದಗಳಿಗೇನೂ ಕೊರತೆಯಿಲ್ಲ. ಪ್ರತಿಯೊಂದು ರಾಜಕೀಯ ಪಕ್ಷಗಳೂ ಶಿವಾಜಿಯ ವರ್ಚಸ್ಸನ್ನು ತಮ್ಮ ತಮ್ಮ ರಾಜಕೀಯ ದೃಷ್ಟಿಕೋನದಿಂದ ನೋಡುವ ಪ್ರವೃತ್ತಿಯು ಬೆಳೆದುಬಿಟ್ಟಿತು. ಇಷ್ಟಕ್ಕೂ ನಿಜವಾದ ಶಿವಾಜಿ ಯಾರೆಂಬುದೇ ಒಂದು ಪ್ರಶ್ನೆಯಾಗಿ ಬಿಟ್ಟಿದೆ. ಈ ವಿಷಯವಾಗಿ ಎರಡು ಸ್ಪಷ್ಟವಾದ ಅಭಿಪ್ರಾಯಗಳಿರುವುದನ್ನು ನಾವು ಕಾಣಬಹುದಾಗಿದೆ. ಒಂದೆಡೆ ಶಿವಾಜಿಯನ್ನು ಗೋವುಗಳು ಹಾಗೂ ಬ್ರಾಹ್ಮಣರ ರಕ್ಷಕ ಹಾಗೂ ಮುಸ್ಲಿಮ್ ವಿರೋಧಿ ರಾಜನೆಂಬಂತೆ ಬಿಂಬಿಸುವ ಪ್ರಯತ್ನಗಳು ನಡೆದಿವೆ. ಲೋಕಮಾನ್ಯ ತಿಲಕರ ಕಾಲದಿಂದ ಮುಂದಿಟ್ಟ ಈ ಚಿಂತನೆಯನ್ನು ತಮ್ಮ ರಾಜಕೀಯ ಕಾರ್ಯಸೂಚಿಗೆ ಹೊಂದಿಕೆಯಾಗಬಲ್ಲ ಐತಿಹಾಸಿಕ ವ್ಯಕ್ತಿಗಳ ಹುಡುಕಾಟದಲ್ಲಿ ಹಿಂದೂ ರಾಷ್ಟ್ರವಾದಿಗಳು ಎತ್ತಿಕೊಂಡು ಬಿಟ್ಟರು. ಗಾಂಧೀಜಿಯವರನ್ನು ಟೀಕಿಸುವ ಸಂದರ್ಭದಲ್ಲಿ ನಾಥೂರಾಮ್ ಗೋಡ್ಸೆಯು ಶಿವಾಜಿ ಅಥವಾ ರಾಣಾಪ್ರತಾಪ ರಾಷ್ಟ್ರೀಯವಾದದ ಮುಂದೆ ಗಾಂಧಿ ಪ್ರತಿಪಾದಿಸುವ ರಾಷ್ಟ್ರೀಯವಾದವು ತೀರಾ ಕುಬ್ಜವಾದುದೆಂದು ಹೇಳಿಕೊಂಡಿದ್ದನು.

ಇದಕ್ಕೆ ಅನುಗುಣವಾಗಿ ಹಿಂದೂ ರಾಷ್ಟ್ರವಾದಿಗಳು ಈ ಎರಡು ಚಿಂತನೆಗಳನ್ನು ಹಿಂದೂ ರಾಷ್ಟ್ರೀಯವಾದವೆಂಬುದಾಗಿ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ ಹಾಗೂ ಮುಸ್ಲಿಮ್ ವಿರೋಧಿ ರೂಪ ನೀಡುತ್ತಿದ್ದಾರೆ. ಗೋವುಗಳು ಹಾಗೂ ಬ್ರಾಹ್ಮಣರು ಶಿವಾಜಿಯ ಗೌರವದ ಪ್ರಮುಖ ಕೇಂದ್ರಬಿಂದುಗಳೆಂಬ ಹಾಗೆ ಬಿಂಬಿಸುವ ಮೂಲಕ ಹಿಂದೂ ರಾಷ್ಟ್ರವಾದದ ಹಿಂದೆ ಬ್ರಾಹ್ಮಣವಾದದ ಕಾರ್ಯಸೂಚಿಯಿರುವುದನ್ನು ಈ ಚಿಂತನೆಯು ಮರೆಮಾಚುತ್ತದೆ. ಸಂಘಪರಿವಾರದ ನೇತೃತ್ವದಲ್ಲಿ ಹಿಂದೂ ರಾಷ್ಟ್ರವಾದಿಗಳ ಹಾಲಿ ಕಾರ್ಯಸೂಚಿಗೆ ಇದು ಚೆನ್ನಾಗಿ ಹೊಂದಿಕೆಯಾಗುತ್ತದೆ.

 2014ರ ಲೋಕಸಭಾ ಚುನಾವಣೆ ಸಂದರ್ಭ ಮುಂಬೈಯಲ್ಲಿ ಮತಯಾಚನೆಯ ವೇಳೆ ಮಾಡಿದ ಭಾಷಣಗಳಲ್ಲಿ ಔರಂಗಜೇಬನ ಖಜಾನೆಯನ್ನು ಲೂಟಿಗೈಯಲು ಶಿವಾಜಿ ಸೂರತ್ ಮೇಲೆ ದಾಳಿ ನಡೆಸಿದ್ದಾಗಿ ಹೇಳಿದ್ದರು. ಶಿವಾಜಿ-ಔರಂಗಜೇಬ್ ಹಾಗೂ ಶಿವಾಜಿ-ಅಫ್ಝಲ್‌ಖಾನ್ ನಡುವಿನ ಸಂಘರ್ಷವನ್ನು, ಹಿಂದೂಗಳು ಹಾಗೂ ಮುಸ್ಲಿಮರ ನಡುವಿನ ಯುದ್ಧವಾಗಿ ಬಿಂಬಿಸಲಾಗುತ್ತಿದೆ. ಆದರೆ ಸತ್ಯಸಂಗತಿ ಏನೆಂದರೆ, ಶ್ರೀಮಂತ ಬಂದರು ನಗರವಾದ ಸೂರತ್ ಹೇರಳ ಸಂಪತ್ತನ್ನು ಹೊಂದಿದ್ದರಿಂದ ಅದರ ಮೇಲೆ ದಾಳಿ ನಡೆದಿತ್ತು. ಬಾಳಾಸಾಮಂತ್ ಬರೆದಿರುವ ಪುಸ್ತಕವು ಈ ಬಗ್ಗೆ ಆಳವಾದ ವಿವರಣೆಯನ್ನು ನೀಡಿದೆ. 1656ರಲ್ಲಿ ಮರಾಠಾ ಪಾಳೇಗಾರ ಚಂದ್ರ ರಾವ್ ಮೋರೆಯ ಅಧೀನದಲ್ಲಿದ್ದ ಜಾವ್ಲಿ ರಾಜ್ಯವನ್ನು ಗೆಲ್ಲುವ ಮೂಲಕ ತನ್ನ ದಿಗ್ವಿಜಯ ಯಾತ್ರೆಯನ್ನು ಆರಂಭಿಸಿದ್ದನು. ಆ ಸಾಮ್ರಾಜ್ಯದಲ್ಲಿದ್ದ ಹೇರಳ ಸಂಪತ್ತನ್ನು ಶಿವಾಜಿ ಸ್ವಾಧೀನಪಡಿಸಿಕೊಂಡಿದ್ದ. ಔರಂಗಜೇಬ್‌ನ ಪರವಾಗಿ ಶಿವಾಜಿಯೊಂದಿಗೆ ಸಂಧಾನ ಮಾತುಕತೆ ನಡೆಸಿದವನು ಮಿಝಾ ರಾಜಾ ಜೈಸಿಂಗ್ ಎಂಬುದು ನಮಗೆ ಗೊತ್ತಿರುವುದರಿಂದ, ಇವರಿಬ್ಬರದೂ ಹಿಂದೂ-ಮುಸ್ಲಿಮ್ ಯುದ್ಧವಲ್ಲವೆಂದು ಸ್ಪಷ್ಟವಾಗುತ್ತದೆ. ಆಪ್ತ ಕಾರ್ಯದರ್ಶಿ ಖಾಝಿ ಹೈದರ್‌ನಂತಹ ಹಲವು ಮುಸ್ಲಿಮ್ ಅಧಿಕಾರಿಗಳು ಹಾಗೂ ಸೇನಾಪ್ರಮುಖರು ಶಿವಾಜಿಯ ಸೇನೆಯಲ್ಲಿದ್ದರು.

ದರ್ಯಾ ಸಾರಂಗ್ ಶಿವಾಜಿ ಸೇನೆಯ ಶಸ್ತ್ರಾಸ್ತ್ರ ವಿಭಾಗದ ಮುಖ್ಯಸ್ಥನಾಗಿದ್ದರೆ, ದೌಲತ್ ಖಾನ್ ಆತನ ನೌಕಾಪಡೆಯ ಉಸ್ತುವಾರಿಯಾಗಿದ್ದ. ಇಬ್ರಾಹೀಂ ಖಾನ್ ಎಂಬಾತ ಶಿವಾಜಿ ಸೇನೆಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಇನ್ನೋರ್ವ ಸೇನಾಪ್ರಮುಖನಾಗಿದ್ದ. ಈ ಸಮ್ಮಿಶ್ರ ಆಡಳಿತವು, ರಾಜರಿಗೆ ಅವರು ತಮ್ಮ ಧರ್ಮವನ್ನು ಅವಲಂಭಿಸಿ ಹಿಂದೂ ಅಥವಾ ಮುಸ್ಲಿಮ್ ಆಡಳಿತವನ್ನು ನಡೆಸುತ್ತಿರಲಿಲ್ಲ ಎಂಬುದು ಮನದಟ್ಟಾಗುತ್ತದೆ. ಶಿವಾಜಿ ಹಾಗೂ ಅಫ್ಝಲ್‌ಖಾನ್ ನಡುವಿನ ಸಂಘರ್ಷದಲ್ಲಿ ರುಸ್ತಮೆ ಜಹಾನ್ ಶಿವಾಜಿಯ ಜೊತೆಗಿದ್ದರೆ, ಕೃಷ್ಣಾಜಿ ಭಾಸ್ಕರ್ ಕುಲಕರ್ಣಿ ಎಂಬಾತ ಅಫ್ಝಲ್‌ಖಾನ್‌ನೊಂದಿಗಿದ್ದ.

ಜನತೆಯ ಕಲ್ಯಾಣದ ಬಗ್ಗೆ ಶಿವಾಜಿಗಿದ್ದ ಕಾಳಜಿಯಿಂದಾಗಿಯೇ ಆತ ಜನಪ್ರಿಯರಾಗಿದ್ದರು. ಸಾಧಾರಣ ರೈತರ ಮೇಲಿದ್ದ ತೆರಿಗೆಯ ಹೊರೆಯನ್ನು ಅವರು ಕಡಿಮೆಗೊಳಿಸಿದ್ದರು ಹಾಗೂ ಗೇಣಿದಾರ ರೈತರ ಮೇಲೆ ಭೂಮಾಲಕರ ಪಾರಮ್ಯವನ್ನು ಕೂಡ ಅವರು ತಗ್ಗಿಸಿದ್ದರು. ಕಾಮ್ರೇಡ್ ಗೋವಿಂದ್ ಪನ್ಸಾರೆ ( ಹೂ ವಾಸ್ ಶಿವಾಜಿ) ಹಾಗೂ ಜಯಂತ್ ಗಡ್ಕರಿ (ಶಿವಾಜಿ: ಏಕ್ ಲೋಕಕಲ್ಯಾಣಕಾರಿ ರಾಜ-ಶಿವಾಜಿ: ಕಿಂಗ್ ಡೂಯಿಂಗ್ ಪೀಪಲ್ಸ್ ವೆಲ್‌ಫೇರ್) ಕೃತಿಗಳಲ್ಲಿ ಶಿವಾಜಿಯನ್ನು ಚೆನ್ನಾಗಿ ದಾಖಲಿಸಲಾಗಿದೆ. ಶಿವಾಜಿ ಕ್ಷತ್ರಿಯ ಜಾತಿಗೆ ಸೇರಿದವನಾಗಿರಲಿಲ್ಲ. ಹೀಗಾಗಿ ಬ್ರಾಹ್ಮಣರು ಆತನಿಗೆ ಪಟ್ಟಾಭಿಷೇಕ ಮಾಡಲು ನಿರಾಕರಿಸಿದ್ದರು. ಹೀಗಾಗಿ ಶಿವಾಜಿ ಕಾಶಿಯಿಂದ ಗಂಗಾಭಟ್ಟ ಎಂಬ ಬ್ರಾಹ್ಮಣನಿಗೆ ಅಪಾರ ದಕ್ಷಿಣೆ ನೀಡಿ ತನ್ನ ರಾಜ್ಯಕ್ಕೆ ಕರೆತಂದಿದ್ದ. ಶಿಕ್ಷಕರಿಗಾಗಿ ಟೀಸ್ತಾ ಸೆಟಲ್ವಾಡ್ ಬರೆದಿರುವ ಕೈಪಿಡಿಯಲ್ಲಿ ಈ ವಾಸ್ತವಾಂಶವನ್ನು ದಾಖಲಿಸಲಾಗಿದೆ.

ಇಂದು ಬಿಜೆಪಿ ಹಾಗೂ ಬ್ರಾಹ್ಮಣಶಾಹಿ ಶಕ್ತಿಗಳು ಶಿವಾಜಿಯನ್ನು ಬ್ರಾಹ್ಮಣ ಹಾಗೂ ಗೋವುಗಳ ಅಭಿಮಾನಿಯೆಂಬಂತೆ ಬಿಂಬಿಸುತ್ತಿದ್ದಾರೆ. ಜ್ಯೋತಿರಾವ್ ಫುಲೆ ಅವರು ಶಿವಾಜಿಯ ಗೌರವಾರ್ಥವಾಗಿ ಬರೆದ ಪೊವ್ಡಾ (ಲಾವಣಿ)ದಲ್ಲಿ ಶಿವಾಜಿಯನ್ನು ಆತನ ಜಾತಿಯ ದೃಷ್ಟಿಕೋನವನ್ನು ಮುಂದಿಟ್ಟು ಚಿತ್ರಿಸಿದ್ದಾರೆ. ಇಂದು ದಲಿತ ಬಹುಜನರು, ಶಿವಾಜಿಯನ್ನು ಹಿಂದೂ ರಾಷ್ಟ್ರವಾದಿಯಾಗಿ ಬಿಂಬಿಸುವ ಪ್ರಯತ್ನಗಳಿಗೆ ಸೊಪ್ಪುಹಾಕುತ್ತಿಲ್ಲ.

ಆದರೆ ಬಿಜೆಪಿಯ ಜಯಭಗವಾನ್ ಗೋಯಲ್ ಅವರಂತಹವರು ಇಂತಹ ಪ್ರಯತ್ನಗಳ ಮೂಲಕ ಎರಡು ಸಂದೇಶಗಳನ್ನು ನೀಡಲು ಯತ್ನಿಸುತ್ತಿದ್ದಾರೆ. ಒಂದೆಡೆ ಅವರು ಶಿವಾಜಿಯನ್ನು ಮುಸ್ಲಿಮ್ ವಿರೋಧಿಯಾಗಿ ಹಾಗೂ ಬ್ರಾಹ್ಮಣ್ಯವಾದದ ಬಣ್ಣದೊಂದಿಗೆ ಚಿತ್ರಿಸಲು ಬಯಸುತ್ತಿದ್ದಾರೆ. ಮೋದಿ ಈಗ ಮಾಡುತ್ತಿರುವುದಕ್ಕೂ, ಶಿವಾಜಿಯ ಸಾಧನೆಗೂ ಸಾಮ್ಯತೆಯಿದೆಯೆಂಬ ಸೂಕ್ಷ್ಮವಾದ ಸಂದೇಶವನ್ನು ನೀಡಲು ಬಯಸುತ್ತಿದ್ದಾರೆ. ಬಿಜೆಪಿಯೇತರ ಶಕ್ತಿಗಳು ಈ ಆಟವನ್ನು ಅರ್ಥಮಾಡಿಕೊಂಡಿದ್ದಾರೆ ಹಾಗೂ ಅವರು ಜ್ಯೋತಿರಾವ್ ಫುಲೆ ಅಂತಹವರು ಹಾಗೂ ದಲಿತರು-ಬಹುಜನರ ಹಕ್ಕುಗಳ ಹೋರಾಟಗಾರರು ಶಿವಾಜಿಯ ನೈಜ ಚಿತ್ರಣವನ್ನು ಜನರ ಮುಂದೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.

Writer - ರಾಮ್ ಪುನಿಯಾಣಿ

contributor

Editor - ರಾಮ್ ಪುನಿಯಾಣಿ

contributor

Similar News