ನೋಟಿ ಬಿನೋದಿನಿ ಬಯೋಪಿಕ್ನಲ್ಲಿ ಐಶ್ವರ್ಯಾ ರೈ

Update: 2020-01-26 12:11 GMT

ಪ್ರದೀಪ್ ಸರ್ಕಾರ್ ಅವರ ಮುಂದಿನ ಚಿತ್ರ ‘ನೋಟಿ ಬಿನೋದಿನಿ’ ಬಯೋಪಿಕ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ನಟಿಸಲಿದ್ದಾರೆ. ಇದು ವೇಶ್ಯೆಯಾಗಿದ್ದು, ಆನಂತರ ನಟಿಯಾಗಿ ಪರಿವರ್ತನೆಯಾದ ಬಿನೋದಿನಿ ದಾಸ್ ಅವರ ಬದುಕಿನ ಕಥೆ. ‘ಮರ್ದಾನಿ’ ಹಾಗೂ ‘ಪರಿಣಿತ’ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರದೀಪ್ ಸರ್ಕಾರ್ ವೇಶ್ಯೆಯೋರ್ವಳ ಬದುಕು ಹಾಗೂ ಆಕೆಯ ಬದುಕಿನ ಪಯಣವನ್ನು ಬೆಳ್ಳಿ ಪರದೆ ಮೇಲೆ ತರಲು ಉತ್ಸುಕರಾಗಿದ್ದಾರೆ. ದಿನಪತ್ರಿಕೆಯೊಂದಿಗೆ ಮಾತನಾಡಿದ ನಿರ್ದೇಶಕ ಪ್ರದೀಪ್ ಸರ್ಕಾರ್, ‘‘ಈ ಬಯೋಪಿಕ್‌ನಲ್ಲಿ ಐಶ್ವರ್ಯಾ ರೈ ನಟಿಸಬೇಕು ಎಂದು ನನ್ನ ಮನಸ್ಸಿನಲ್ಲಿ ಇತ್ತು. ಕೆಲವು ತಿಂಗಳ ಹಿಂದೆ ನಾನು ಅವರನ್ನು ಸಂಪರ್ಕಿಸಿದ್ದೆ. ಮೊದಲ ನಿರೂಪಣೆಯಲ್ಲೇ ಅವರು ಕಥೆಯನ್ನು ಇಷ್ಟಪಟ್ಟರು ಹಾಗೂ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು’’ ಎಂದರು. 19ನೇ ಶತಮಾನದಲ್ಲಿ ನಿರ್ಮಾಪಕಿಯಾಗುವ ಆಕಾಂಕ್ಷೆ ಹೊಂದಿದ್ದ ಮೊದಲ ನಟಿಯರಲ್ಲಿ ಬಿನೋದಿನಿ ಕೂಡ ಒಬ್ಬರು. ಬಿನೋದಿನಿ ಅವರ ಬದುಕಿನ ಮೇಲೆ ಇನ್ನಷ್ಟು ಬೆಳಕು ಬೀರಿರುವ ಪ್ರದೀಪ್ ಸರ್ಕಾರ್, ‘‘ತನ್ನ ಗುರಿ ಸಾಧಿಸಲು ಆಕೆ ಪಟ್ಟಿರುವ ಶ್ರಮ ಆಸಕ್ತಿದಾಯಕ. ಅವರು ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಆತ್ಮೀಯರು ಕೂಡ ಆಕೆಯನ್ನು ಬಳಕೆ ಮಾಡಿಕೊಂಡರು. ಇದು ಅದ್ಭುತ ಕಥೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News