ಸಿಎಎಗೆ ಸುಪ್ರೀಂಕೋರ್ಟ್ ತಡೆ ನೀಡಲು ನಿರಾಕರಿಸಿದ ನಂತರ ಸಿಜೆಐಗೆ ಪತ್ರ

Update: 2020-01-26 17:20 GMT

ಲಕ್ನೊ, ಜ.26: ವಿವಾದಾತ್ಮಕ ಪೌರತ್ವ ಕಾಯ್ದೆ ಜಾರಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ ಬಳಿಕ ಇದೀಗ ಉತ್ತರಪ್ರದೇಶದ ಬಿಜ್ನೋರ್ ಜಿಲ್ಲೆಯ ಕೆಲವು ನಿವಾಸಿಗಳು ಪೌರತ್ವ ಕಾಯ್ದೆ ರದ್ದುಗೊಳಿಸಬೇಕೆಂದು ಕೋರಿ ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ)ರಿಗೆ ಪತ್ರ ಬರೆದಿದ್ದಾರೆ.

ಪೌರತ್ವ ಕಾಯ್ದೆ ಜಾರಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಪೌರತ್ವ ಕಾಯ್ದೆ ಜಾರಿಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು ಕೇಂದ್ರ ಸರಕಾರದ ಉತ್ತರ ಕೈಸೇರಿದ ಬಳಿಕ ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಅಲ್ಲದೆ ಅರ್ಜಿಗೆ ಉತ್ತರಿಸಲು ಕೇಂದ್ರ ಸರಕಾರಕ್ಕೆ 4 ವಾರಗಳ ಕಾಲಾವಕಾಶ ನೀಡಿದೆ.

2019ರ ಡಿಸೆಂಬರ್‌ನಲ್ಲಿ ಉತ್ತರಪ್ರದೇಶದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ಪೊಲೀಸರು 80ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಇದರಿಂದ ಹಲವರು ಈಗ ಕಾಯ್ದೆಯ ವಿರುದ್ಧ ಮಾತನಾಡಲು ಹಿಂಜರಿಯುತ್ತಿದ್ದಾರೆ. ಅಲ್ಲದೆ ಪ್ರತಿಭಟನೆಯ ನೇತೃತ್ವ ವಹಿಸುವವರೇ ಇಲ್ಲ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಸಿಜೆಐಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದು ಬಿಜ್ನೋರ್‌ನ ನಿವಾಸಿ ಶಾರಿಕ್ ಹೇಳಿದ್ದಾರೆ.

ಸಿಜೆಐಗೆ ಬರೆದ ಪತ್ರವನ್ನು ಹಿಡಿದುಕೊಂಡು ತಾನು ಬಿಜ್ನೋರ್‌ನ ಪ್ರತೀ ಮನೆಗೂ ಭೇಟಿ ನೀಡಿದ್ದೇನೆ. ಆದರೆ ಮತ್ತೊಮ್ಮೆ ಅಧಿಕಾರಿಗಳ ವಕ್ರದೃಷ್ಟಿಗೆ ಒಳಗಾಗುವ ಭೀತಿಯಿಂದ ಹಲವರು ಇದಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ. ಜೋರಾಗಿ ಮಾತನಾಡಬೇಡಿ, ಪೊಲೀಸರು ಕೇಳಿಸಿಕೊಂಡರೆ ಕಷ್ಟ ಎಂದು ವ್ಯಕ್ತಿಯೊಬ್ಬ ಹೇಳಿದ್ದಾನೆ. ವಿಪರ್ಯಾಸವೆಂದರೆ, ಕೆಲವರು ರಾಷ್ಟ್ರೀಯ ಪೌರತ್ವ ನೋಂದಣಿಯಡಿ ವಿವರ ಸಂಗ್ರಹಿಸಲು ಬಂದಿರುವ ಸರಕಾರಿ ಅಧಿಕಾರಿ ಎಂದು ತನ್ನನ್ನು ಸಂದೇಹಿಸಿದ್ದರು ಎಂದು ಶಾರಿಕ್ ಹೇಳಿದ್ದಾರೆ. ನ್ಯಾಯಾಂಗದ ಮೇಲೆ ನಂಬಿಕೆಯಿದೆ. ನ್ಯಾಯಾಂಗ ಈ ಸಮಸ್ಯೆಯನ್ನು ಪರಿಹರಿಸಲಿದೆ ಎಂಬ ನಂಬಿಕೆಯಿದೆ. ಭೀಮ್ ಸೇನೆಯ ಅಧ್ಯಕ್ಷ ಚಂದ್ರಶೇಖರ್ ಆಝಾದ್‌ಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ನ್ಯಾಯಾಂಗದ ಕುರಿತ ತನ್ನ ವಿಶ್ವಾಸ ಹೆಚ್ಚಿದೆ ಎಂದು ಶಾರಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News