ಗಣರಾಜ್ಯೋತ್ಸವ ಸಂಭ್ರಮದ ಮಧ್ಯೆ ಅಸ್ಸಾಂನಲ್ಲಿ 4ಕಡೆ ಬಾಂಬ್ ಸ್ಫೋಟ

Update: 2020-01-26 17:52 GMT
ಫೋಟೊ ಕೃಪೆ: twitter

ಗುವಾಹಟಿ, ಜ.26: ಗಣರಾಜ್ಯೋತ್ಸವದ ಸಂಭ್ರಮದ ಮಧ್ಯೆಯೇ ಅಸ್ಸಾಂನಲ್ಲಿ 4 ಬಾಂಬ್ ಸ್ಫೋಟವಾಗಿದೆ. ಯಾವುದೇ ಸಾವುನೋವಿನ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಿಬ್ರುಗಢ ಜಿಲ್ಲೆಯಲ್ಲಿ ಮೂರು ಮತ್ತು ಚರಾಯಿದೇವಿ ಜಿಲ್ಲೆಯಲ್ಲಿ ಒಂದು ಸ್ಫೋಟ ಸಂಭವಿಸಿದೆ. ಬೆಳಿಗ್ಗೆ 8.15ರಿಂದ 8.25ರ ಅವಧಿಯಲ್ಲಿ ಈ ಸರಣಿ ಸ್ಫೋಟ ಸಂಭವಿಸಿದೆ. ಚರಾಯಿದೇವಿ ಜಿಲ್ಲೆಯ ಸೊನಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಟ್ಯೋಕ್‌ಘಾಟ್ ಎಂಬಲ್ಲಿ ಅಂಗಡಿಯೊಂದರ ಹೊರಗೆ ಪ್ರಥಮ ಸ್ಫೋಟ ಸಂಭವಿಸಿದೆ. ಬಳಿಕ ದಿಬ್ರುಗಢದ ಗ್ರಹಾಂ ಬಝಾರ್‌ನಲ್ಲಿ ಮತ್ತು ಎಟಿ ರೋಡ್‌ನ ಗುರುದ್ವಾರದ ಬಳಿಯಲ್ಲಿ ತಲಾ ಒಂದು ಬಾಂಬ್ ಸ್ಫೋಟಿಸಿದೆ. ಮೂರನೇ ಬಾಂಬ್ ತಿನಿಯಾಲಿ ಪಟ್ಟಣದ ಪೊಲೀಸ್ ಠಾಣೆಗಿಂತ 100 ಮೀ ದೂರದಲ್ಲಿ ಸ್ಫೋಟವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪದ್ಮನಾಭ ಬರುವಾ ಹೇಳಿದ್ದಾರೆ.

 ಗ್ರಹಾಂ ಬಝಾರ್ ಮತ್ತು ಎಟಿ ರೋಡ್‌ನಲ್ಲಿ ಸುಧಾರಿತ ಸ್ಫೋಟದ ಸಾಧನ ಬಳಸಿ ಬಾಂಬ್ ಸ್ಫೋಟಿಸಲಾಗಿದೆ. ಮೋಟಾರ್ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಬಾಂಬ್ ಎಸೆದು ಪರಾರಿಯಾಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಆಧಾರದಲ್ಲಿ ತನಿಖೆ ಮುಂದುವರಿದಿದೆ ಎಂದು ಬರುವಾ ಹೇಳಿದ್ದಾರೆ. ಉಲ್ಫಾ ಉಗ್ರರ ಕೃತ್ಯ ಇದಾಗಿದೆ ಎಂದು ಶಂಕಿಸಲಾಗಿದೆ.

ಉಲ್ಫಾ (ಇಂಡಿಪೆಂಡೆಂಟ್) ಉಗ್ರರ ಸಂಘಟನೆ ಹಾಗೂ ಈಶಾನ್ಯ ಭಾರತದ ಇತರ ಕೆಲವು ಸಂಘಟನೆಗಳು ಗಣರಾಜ್ಯೋತ್ಸವ ಬಹಿಷ್ಕರಿಸಬೇಕೆಂದು ಕರೆ ನೀಡಿದ್ದವು. ಘಟನೆಯನ್ನು ಖಂಡಿಸಿರುವ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್, ಗಣರಾಜ್ಯೋತ್ಸವದ ಪವಿತ್ರ ದಿನದಂದು ನಡೆಸಿದ ಈ ಕೃತ್ಯ ಉಗ್ರರ ಹತಾಶೆಯ ದ್ಯೋತಕವಾಗಿದೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೊನೊವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News