'ಕೋರ್ಟ್ ಗೆ ಬರುವ ಬದಲು ಟಿವಿ ಚಾನೆಲ್ ಗೆ ಹೋಗಬೇಕಾಗಿತ್ತು': ಬಿಜೆಪಿ, ಟಿಎಂಸಿ ವಿರುದ್ಧ ಸಿಜೆಐ ಆಕ್ರೋಶ

Update: 2020-01-27 12:57 GMT

ಹೊಸದಿಲ್ಲಿ: "ನ್ಯಾಯಾಲಯವನ್ನು ರಾಜಕೀಯ ವೈಷಮ್ಯವನ್ನು ತೀರಿಸಲು ಬಳಸಬೇಡಿ, ಇದರ ಬದಲು ಯಾವುದಾದರೂ ಟಿವಿ ಚಾನೆಲ್‍ ಗೆ ಹೋಗಿ ಈ ಕೆಲಸ ಮಾಡಿ'' ಎಂದು  ಬಿಜೆಪಿ ಹಾಗೂ ಪಶ್ಚಿಮ ಬಂಗಾಳ ಸರಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಆಕ್ರೋಶ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳದಲ್ಲಿ ನಡೆದ ರಾಜಕೀಯ ಕೊಲೆಗಳಿಗೆ ಸಂಬಂಧಿಸಿದಂತೆ ಬಿಜೆಪಿ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಬೊಬ್ಡೆ ಮೇಲಿನಂತೆ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಸರಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದರೆ ಬಿಜೆಪಿ ಪರವಾಗಿ ಗೌರವ್ ಭಾಟಿಯಾ ವಾದಿಸಿದ್ದರು. ಬಿಜೆಪಿ ವಕ್ತಾರ ಗೌರವ್ ಬನ್ಸಾಲ್ ಈ ಪಿಐಎಲ್ ದಾಖಲಿಸಿದ್ದರು. ಇದನ್ನು ವಿರೋಧಿಸಿ ತಮ್ಮ ವಾದ ಮಂಡಿಸಿದ ಕಪಿಲ್ ಸಿಬಲ್  ರಾಜಕೀಯ ಪಕ್ಷವೊಂದಕ್ಕೆ ಪಿಐಎಲ್ ಸಲ್ಲಿಸಲು ಅನುಮತಿಸಬೇಕೇ ಬೇಡವೇ ಎಂಬ ವಿಚಾರವನ್ನು ನ್ಯಾಯಾಲಯ ಪರಿಗಣಿಸಬೇಕೆಂದು ಹೇಳಿದರು.

"ಎರಡೂ ಕಡೆಗಳು ತಮ್ಮ ರಾಜಕೀಯ ದ್ವೇಷವನ್ನು ತೀರಿಸಲು ನ್ಯಾಯಾಲಯದ ವೇದಿಕೆ ಬಳಸುತ್ತಿವೆ ಎಂಬುದು ನಮಗೆ ತಿಳಿದಿದೆ'' ಎಂದು ಸಿಜೆಐ ಬೊಬ್ಡೆ ಹೇಳಿದರು. ಕೋರ್ಟಿನಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡಿದ್ದಕ್ಕೆ ವಕೀಲರಾದ ಕಪಿಲ್ ಸಿಬಲ್ ಹಾಗೂ ಗೌರವ್ ಭಾಟಿಯಾ ಇಬ್ಬರನ್ನೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ದುಲಾಲ್ ಕುಮಾರ್ ಕುಟುಂಬ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿರುವ ಅಪೀಲಿನ ಕುರಿತಾದ ವಿಚಾರಣೆ ನಡೆಸಿದ ನ್ಯಾಯಾಲಯ  ಈ ಕುರಿತಂತೆ ನಾಲ್ಕು ವಾರಗಳೊಳಗಾಗಿ ವಿಸ್ತೃತ  ಪ್ರತಿಕ್ರಿಯೆ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರಕಾರಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News