ಹೆತ್ತವರ ಜನ್ಮಸ್ಥಳ, ಆಧಾರ್ ಮಾಹಿತಿ ಸಂಗ್ರಹಕ್ಕೆ ಎನ್ ಪಿಆರ್ ನಿಯಮಗಳಲ್ಲಿ ಅವಕಾಶವಿಲ್ಲ

Update: 2020-01-27 14:48 GMT

 ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್)ಗಾಗಿ ಸಮೀಕ್ಷೆಗಳು ಇನ್ನೆರಡು ತಿಂಗಳುಗಳಲ್ಲಿ ಆರಂಭಗೊಳ್ಳಲಿವೆ. ಭಾರತದ ಎಲ್ಲ ನಿವಾಸಿಗಳ ಪಟ್ಟಿಯನ್ನು ಸಿದ್ಧಗೊಳಿಸಲು ನಡೆಸಲಾಗುವ ಈ ಪ್ರಕ್ರಿಯೆಯ ಅಂಗವಾಗಿ ಕೇಳಲಾಗುವ ಅಂತಿಮ ಪ್ರಶ್ನೆಗಳ ಕುರಿತು ಈ ವರೆಗೆ ಸ್ಪಷ್ಟತೆಯಿಲ್ಲ.

2010ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಸಿದ್ಧಗೊಳಿಸಲಾಗಿದ್ದ ಎನ್‌ಪಿಆರ್‌ಗೆ ಹೋಲಿಸಿದರೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರವು 2019ರಲ್ಲಿ ನಡೆಸಿದ್ದ ಪ್ರಾಯೋಗಿಕ ಎನ್‌ಪಿಆರ್ ಸಮೀಕ್ಷೆಗಳಲ್ಲಿ ವ್ಯಕ್ತಿಯ ಹೆತ್ತವರ ಜನ್ಮಸ್ಥಳ ಮತ್ತು ಜನನ ದಿನಾಂಕ,ಆಧಾರ್ ಸಂಖ್ಯೆ,ಪಾಸ್‌ಪೋರ್ಟ್ ಸಂಖ್ಯೆ,ಮೊಬೈಲ್ ಸಂಖ್ಯೆ,ಮತದಾರರ ಗುರುತಿನ ಚೀಟಿಯ ಸಂಖ್ಯೆ,ವಾಹನ ಚಾಲನೆ ಪರವಾನಿಗೆ ಸಂಖ್ಯೆ ಮತ್ತು ಮಾತೃಭಾಷೆ,ಹೀಗೆ ಹೆಚ್ಚುವರಿ ಎಂಟು ಮಾಹಿತಿಗಳನ್ನು ಸಂಗ್ರಹಿಸಲಾಗಿತ್ತು.

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ಸೃಷ್ಟಿಸುವ ಮೋದಿ ಸರಕಾರದ ಯೋಜನೆಯ ಹಿನ್ನೆಲೆಯಲ್ಲಿ ಈ ಎಂಟು ದತ್ತಾಂಶಗಳು ವಿವಾದಾತ್ಮಕವಾಗಿವೆ. ಈ ಹೆಚ್ಚುವರಿ ಪ್ರಶ್ನೆಗಳು ಎನ್‌ಪಿಆರ್‌ ನ್ನು ಉದ್ದೇಶಿತ ರಾಷ್ಟ್ರವ್ಯಾಪಿ ಎನ್‌ಆರ್‌ಸಿಯ ಅಡಿಪಾಯವನ್ನಾಗಿ ಬಳಸುವ ಸರಕಾರದ ಉದ್ದೇಶವನ್ನು ಬಹಿರಂಗಗೊಳಿಸಿವೆ ಎನ್ನುವುದು ಹೆಚ್ಚಿನವರ ಅಭಿಪ್ರಾಯವಾಗಿದೆ. ಈ ಕಳವಳಗಳಿಂದಾಗಿ ಎನ್‌ಆರ್‌ಸಿಗೆ ವಿರುದ್ಧವಾಗಿರುವ ಎರಡು ಬಿಜೆಪಿಯೇತರ ಆಡಳಿತದ ರಾಜ್ಯಗಳು ಎನ್‌ಪಿಆರ್ ಕುರಿತು ಕಾರ್ಯವನ್ನು ಸ್ಥಗಿತಗೊಳಿಸಿವೆ.

 ಈ ವಿವಾದದ ಕುರಿತಂತೆ ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ವಿರೋಧಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹೆಚ್ಚುವರಿ ಪ್ರಶ್ನೆಗಳು ಐಚ್ಛಕವಾಗಿವೆ ಎಂದು ಕೆಲವರು ಹೇಳುತ್ತಿದ್ದರೆ,ಈ ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯವಾಗಿದೆ ಎಂದು ಇತರರು ಹೇಳುತ್ತಿದ್ದಾರೆ.

ಈ ಎಂಟು ಹೆಚ್ಚುವರಿ ಪ್ರಶ್ನೆಗಳಿಗೆ ಕಾನೂನಿನ ಬೆಂಬಲವಿಲ್ಲ ಎಂದು ಸುದ್ದಿ ಜಾಲತಾಣ ‘scroll.in’ ತನ್ನ ವಿಶ್ಲೇಷಣಾ ವರದಿಯಲ್ಲಿ ತಿಳಿಸಿದೆ. ಎನ್‌ ಪಿಆರ್ 2003ರ ಪೌರತ್ವ ನಿಯಮಾವಳಿಗಳ ವ್ಯಾಪ್ತಿಯಲ್ಲಿದ್ದು,ಸರಕಾರವು ಸಂಗ್ರಹಿಸಬಹುದಾದ ಮಾಹಿತಿಗಳನ್ನು ಈ ನಿಯಮಾವಳಿಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. 2020ರಲ್ಲಿ ಕೇಳಲು ಉದ್ದೇಶಿಸಲಾಗಿರುವ ಪ್ರಶ್ನೆಗಳಿಗೆ ಸಂಬಂಧಿಸಿದ ಕ್ಷೇತ್ರಗಳು ಈ ನಿಯಮಾವಳಿಗಳಲ್ಲಿ ಇಲ್ಲ.

ಹೊಸ ಎನ್‌ಪಿಆರ್ ಕುರಿತ ಕಳವಳಗಳು

ಪಶ್ಚಿಮ ಬಂಗಾಳವು ಡಿ.17ರಂದು ಎನ್‌ಪಿಆರ್ ಪ್ರಕ್ರಿಯೆಗೆ ತಡೆ ನೀಡಿದ್ದು,ಹಾಗೆ ಮಾಡಿದ ಮೊದಲ ರಾಜ್ಯವಾಗಿದೆ. ಮೂರು ದಿನಗಳ ಬಳಿಕ ಕೇರಳವೂ ಪಶ್ಚಿಮ ಬಂಗಾಳವನ್ನು ಅನುಸರಿಸಿತ್ತು. ಎನ್‌ಪಿಆರ್ ಕುರಿತು ಕಾಂಗ್ರೆಸ್ ಗಂಭೀರ ಆಕ್ಷೇಪಗಳನ್ನೆತ್ತಿದೆಯಾದರೂ ಅದರ ಆಡಳಿತವಿರುವ ರಾಜ್ಯಗಳು ಈ ಪ್ರಕ್ರಿಯೆಯನ್ನು ತಡೆಯಲು ಈವರೆಗೂ ಆದೇಶಗಳನ್ನು ಹೊರಡಿಸಿಲ್ಲ.

ಕಾನೂನಾತ್ಮಕವಾಗಿ ಎನ್‌ ಪಿಆರ್ ಎನ್‌ಆರ್‌ಸಿಯ ಮೊದಲ ಹೆಜ್ಜೆಯಾಗಿದೆ ಎನ್ನುವುದು ಕಳವಳಗಳಿಗೆ ಪ್ರಮುಖ ಕಾರಣವಾಗಿದೆ. 2010ರ ಎನ್‌ಪಿಆರ್ ಎನ್ ‌ಆರ್‌ಸಿಗೆ ಬುನಾದಿ ಹಾಕಿರಲಿಲ್ಲ, ಆದರೆ 2020ರ ಎನ್‌ ಪಿಆರ್‌ನ ಪ್ರಾಯೋಗಿಕ ಸಮೀಕ್ಷೆಗಳಲ್ಲಿ ಹೆತ್ತವರ ಜನ್ಮಸ್ಥಳದಂತಹ ಮಾಹಿತಿಗಳನ್ನು ಕಲೆ ಹಾಕಲಾಗಿದೆ ಮತ್ತು ಇದು ಪೌರತ್ವವನ್ನು ನಿರ್ಧರಿಸುವ ಏಕಮಾತ್ರ ಉದ್ದೇಶವನ್ನು ಹೊಂದಿದೆ ಎನ್ನುವುದನ್ನು ಟೀಕಾಕಾರರು ಬೆಟ್ಟು ಮಾಡಿದ್ದಾರೆ. ಏಕೆಂದರೆ ಪೌರತ್ವ ಕಾಯ್ದೆಯಂತೆ 1987,ಜುಲೈ 1ರ ನಂತರ ಭಾರತದಲ್ಲಿ ಜನಿಸಿರುವವರ ಹೆತ್ತವರಿಬ್ಬರೂ ಭಾರತೀಯ ಪ್ರಜೆಗಳಾಗಿದ್ದರೆ ಮಾತ್ರ ಅವರನ್ನು ಭಾರತೀಯ ಪೌರರನ್ನಾಗಿ ಪರಿಗಣಿಸಲಾಗುತ್ತದೆ.

ಆಧಾರ್ ಸಂಖ್ಯೆಯನ್ನು ಸಂಗ್ರಹಿಸುವುದು ಈಗಾಗಲೇ ಅಸ್ಸಾಮಿನಲ್ಲಿ ಆಗಿರುವಂತೆ ವ್ಯಕ್ತಿಯ ಡೆಮಾಗ್ರಾಫಿಕ್ ಮಾಹಿತಿಗಳನ್ನು ಅವರ ಬಯೊಮೆಟ್ರಿಕ್ ಮಾಹಿತಿಗಳೊಂದಿಗೆ ಜೋಡಣೆ ಮಾಡಲು ಅವಕಾಶವನ್ನು ಕಲ್ಪಿಸುತ್ತದೆ. ಇತರ ಪ್ರಶ್ನೆಗಳಿಗೆ ಉತ್ತರಗಳು ಎನ್‌ಆರ್‌ಸಿಯು ವ್ಯಕ್ತಿಯನ್ನು ‘ಅಕ್ರಮ ವಲಸಿಗ ’ಎಂದು ಗುರುತಿಸಿದಾಗ ಬಳಸಬಹುದಾದ,ವ್ಯಕ್ತಿಯ ಸಾಧ್ಯವಿರುವ ಎಲ್ಲ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಲು ಸರಕಾರಕ್ಕೆ ಅವಕಾಶವನ್ನು ನೀಡುತ್ತವೆ.

ಸರಕಾರದ ಹೇಳಿಕೆಗಳ ಕುರಿತು ಗೊಂದಲ

ಸರಣಿ ಹೇಳಿಕೆಗಳನ್ನು ನೀಡುವ ಮೂಲಕ ಮೋದಿ ಸರಕಾರವು ಈ ಕಳವಳಗಳಿಗೆ ಪ್ರತಿಕ್ರಿಯಿಸಿದೆ. ಈ ಪೈಕಿ ಕೆಲವನ್ನು ಅಧಿಕೃತವಾಗಿ ನೀಡಲಾಗಿದ್ದರೆ ಹೆಚ್ಚಿನವು ಅನಾಮಿಕ ಮಾಧ್ಯಮ ಸೋರಿಕೆಗಳನ್ನು ಬಳಸಿ ನೀಡಲ್ಪಟ್ಟಿವೆ.

 ಎನ್‌ಪಿಆರ್‌ಗೆ ಮಾಹಿತಿಗಳನ್ನು ನೀಡುವಾಗ ಆಧಾರ್ ಸಂಖ್ಯೆಗಳನ್ನು ಒದಗಿಸುವುದು ಐಚ್ಛಿಕವಾಗಿದೆ ಎಂದು ಡಿ.24ರಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಹೇಳಿದ್ದರೆ ಅದೇ ದಿನ ಗೃಹಸಚಿವ ಅಮಿತ್ ಶಾ ಅವರು,ಎನ್‌ಪಿಆರ್‌ನಲ್ಲಿ ಜನರು ಸ್ವಯಂಪ್ರೇರಣೆಯಿಂದ ಮಾಹಿತಿಗಳನ್ನು ಬಹಿರಂಗಗೊಳಿಸಬೇಕು ಎಂದು ತಿಳಿಸಿದ್ದರು. ಎನ್‌ಪಿಆರ್‌ನಲ್ಲಿ ಪ್ರತಿಯಿಂದು ಪ್ರಶ್ನೆಗೂ ಸ್ವಯಂಪ್ರೇರಣೆಯಿಂದ ಉತ್ತರಿಸಬಹುದು ಎನ್ನುವುದನ್ನು ಈ ಹೇಳಿಕೆಯು ಸೂಚಿಸುತ್ತದೆ.

ಶಾ ಹೇಳಿಕೆ ಇನ್ನೂ ಹಸಿರಾಗಿರುವಾಗಲೇ ಅವರ ಸಚಿವಾಲಯದ ಅನಾಮಿಕ ಅಧಿಕಾರಿಯೋರ್ವರು ಅದಕ್ಕೆ ವಿರುದ್ಧವಾದ ಹೇಳಿಕೆಯೊಂದನ್ನು ನೀಡಿದ್ದರು. ಆಧಾರ,ಪಾಸ್‌ಪೋರ್ಟ್,ವಾಹನ ಚಾಲನೆ ಪರವಾನಿಗೆ ಮತ್ತು ಮತದಾರರ ಗುರುತು ಚೀಟಿ ಸಂಖ್ಯೆಗಳನ್ನು ಎನ್‌ಪಿಆರ್ ಸಮೀಕ್ಷಕರಿಗೆ ನೀಡುವುದು ಕಡ್ಡಾಯವಾಗಿದೆ ಎಂದು ಈ ಅಧಿಕಾರಿ ಹೇಳಿದ್ದನ್ನು ಆಂಗ್ಲ ದೈನಿವೊಂದು ಜ.16ರಂದು ಉಲ್ಲೇಖಿಸಿತ್ತು.

ಗೃಹಸಚಿವಾಲಯವು ಹೊರಡಿಸಿರುವ ಎನ್‌ಪಿ ಆರ್ ತರಬೇತಿ ಕೈಪಿಡಿಯಲ್ಲಿ ‘‘ಸಮೀಕ್ಷಕರು ಪ್ರತಿ ವ್ಯಕ್ತಿಯಿಂದ ಆಧಾರ ಸಂಖ್ಯೆಯನ್ನು ‘ಸ್ವಯಂಪ್ರೇರಣೆ ’ಯಿಂದ ಸಂಗ್ರಹಿಸಲಿದ್ದಾರೆ ’ಎಂದು ಪ್ರತಿಪಾದಿಸಿರುವುದು ವಿಷಯವನ್ನು ಇನ್ನಷ್ಟು ಗೊಂದಲಕಾರಿಯಾಗಿಸಿದೆ. ಕೈಪಿಡಿಯಲ್ಲಿ ಇತರ ಯಾವುದೇ ದತ್ತಾಂಶವನ್ನು ಸ್ವಯಂಪ್ರೇರಿತ ಎಂದು ಹೇಳಲಾಗಿಲ್ಲ ಮತ್ತು ‘ಕುಟುಂಬದಲ್ಲಿಯ ಎಲ್ಲ ಸದಸ್ಯರಿಗೆ ಸಂಬಂಧಿಸಿದ ಸರಿಯಾದ ಮಾಹಿತಿಗಳನ್ನು ನೀಡುವುದು ವ್ಯಕ್ತಿಯ ಕರ್ತವ್ಯವಾಗಿದೆ ಎಂಬ ಬಗ್ಗೆ ಆತನಿಗೆ/ಆಕೆಗೆ ಮಾಹಿತಿ ನೀಡುವಂತೆ ’ ಸಮೀಕ್ಷಕರಿಗೆ ನಿರ್ದೇಶ ನೀಡಲಾಗಿದೆ.

ಆದರೆ ಅನಾಮಿಕ ಸರಕಾರಿ ಅಧಿಕಾರಿಯೋರ್ವರು ವಿವಾದಾತ್ಮಕ ಹೆತ್ತವರ ಜನ್ಮಸ್ಥಳ ಸೇರಿದಂತೆ ಎನ್‌ಪಿಆರ್ ದತ್ತಾಂಶಗಳನ್ನು ಒದಗಿಸುವುದು ಐಚ್ಛಿಕವಾಗಿದೆ ಎಂದು ಹೇಳಿರುವುದನ್ನು ಜ.17ರಂದು ಆಂಗ್ಲದೈನಿಕವೊಂದು ಉಲ್ಲೇಖಿಸಿದೆ. ಜ.22 ರಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ಕಾನೂನು ಏನು ಹೇಳುತ್ತದೆ?

 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರವು ರೂಪಿಸಿದ್ದ ಪೌರತ್ವ ನಿಯಮಾವಳಿಗಳಲ್ಲಿ ಸ್ವಯಂಪ್ರೇರಣೆಯಿಂದ ಯಾವುದೇ ಎನ್‌ ಪಿಆರ್ ಮಾಹಿತಿಯನ್ನು ಬಹಿರಂಗಗೊಳಿಸುವುದನ್ನು ಉಲ್ಲೇಖಿಸಲಾಗಿಲ್ಲ. ವಾಸ್ತವದಲ್ಲಿ ಈ ನಿಯಮಾವಳಿಗಳು ತಪ್ಪು ಮಾಹಿತಿಯನ್ನೊದಗಿಸುವ ವ್ಯಕ್ತಿಗೆ ದಂಡವನ್ನು ವಿಧಿಸಲು ಅವಕಾಶವನ್ನು ಕಲ್ಪಿಸಿವೆ.

ಜನಸಂಖ್ಯಾ ನೋಂದಣಿ ಸಿದ್ಧಪಡಿಸಲು ನಿಗದಿತ ಅವಧಿಯಲ್ಲಿ ಕುಟುಂಬದ ಎಲ್ಲ ಸದಸ್ಯರ ಸಂಖ್ಯೆ,ಹೆಸರುಗಳು ಮತ್ತು ಇತರ ವಿವರಗಳನ್ನು ಒದಗಿಸುವ ಜವಾಬ್ದಾರಿ ಕುಟುಂಬದ ಮುಖ್ಯಸ್ಥರದ್ದಾಗಿರುತ್ತದೆ ಎಂದು ಈ ನಿಯಮಾವಳಿಗಳಲ್ಲಿ ಹೇಳಲಾಗಿದೆ.

ಹೆಸರು, ತಂದೆಯ ಹೆಸರು,ತಾಯಿಯ ಹೆಸರು,ಲಿಂಗ,ಜನ್ಮದಿನಾಂಕ,ಜನನಸ್ಥಳ,ವಾಸದ ವಿಳಾಸ (ಹಾಲಿ ಮತ್ತು ಕಾಯಂ),ವೈವಾಹಿಕ ಸ್ಥಿತಿಗತಿ-ಮದುವೆಯಾಗಿದ್ದರೆ ಸತಿ/ಪತಿಯ ಹೆಸರು,ಗೋಚರವಾಗುವ ಗುರುತಿನ ಚಿಹ್ನೆಗಳು,ಪ್ರಜೆಯ ನೋಂದಣಿಯ ದಿನಾಂಕ, ನೋಂದಣಿಯ ಕ್ರಮಸಂಖ್ಯೆ ಮತ್ತು ರಾಷ್ಟ್ರೀಯ ಗುರುತು ಸಂಖ್ಯೆ ಹೀಗೆ 12 ಮಾಹಿತಿಗಳನ್ನು ಎನ್‌ಪಿಆರ್‌ಗಾಗಿ ಸಂಗ್ರಹಿಸಬೇಕಾದ ವಿವರಗಳೆಂದು ನಿಯಮಾವಳಿಗಳಲ್ಲಿ ಪಟ್ಟಿ ಮಾಡಲಾಗಿದೆ ಎನ್ನುವುದು ಇಲ್ಲಿ ಮಹತ್ವ ಪಡೆದುಕೊಳ್ಳುತ್ತದೆ.

ಆಧಾರ್, ಮೊಬೈಲ್ ಫೋನ್ ಸಂಖ್ಯೆ,ಹೆತ್ತವರ ಜನ್ಮದಿನಾಂಕ ಮತ್ತು ಜನನಸ್ಥಳ, ಪಾಸ್‌ಪೋರ್ಟ್ ಸಂಖ್ಯೆ,ಮತದಾರರ ಗುರುತಿನ ಚೀಟಿ,ವಾಹನ ಚಾಲನೆ ಪರವಾನಿಗೆ ಸಂಖ್ಯೆ ಮತ್ತು ಮಾತೃಭಾಷೆಯಂತಹ ಹೊಸ ಪ್ರಶ್ನೆಗಳ ಪೈಕಿ ಯಾವುದೂ 2003ರ ಪೌರತ್ವ ನಿಯಮಾವಳಿಗಳಲ್ಲಿ ಉಲ್ಲೇಖಗೊಂಡಿಲ್ಲ ಎನ್ನುವುದು ಗಮನಾರ್ಹವಾಗಿದೆ.

ಆದರೆ ಈ ಎಲ್ಲ ಪ್ರಶ್ನೆಗಳನ್ನು ಪ್ರಾಯೋಗಿಕ ಸಮೀಕ್ಷೆಗಳಲ್ಲಿ ಬಳಸಲಾಗಿದ್ದ 2020ರ ಎನ್‌ಪಿಆರ್ ಟೆಸ್ಟ್ ಫಾರ್ಮ್ ಗಳಲ್ಲಿ ಸೇರ್ಪಡೆಗೊಳಿಸ ಲಾಗಿದೆ. ಟೆಸ್ಟ್ ಫಾರ್ಮ್‌ನ್ನು ಅಂತಿಮ ನಮೂನೆಯಾಗಿ ಬಳಸಲಾಗುವುದೆಂದು ಅನಾಮಿಕ ಸರಕಾರಿ ಅಧಿಕಾರಿಯೋರ್ವರು ಹೇಳಿದ್ದನ್ನು ಆಂಗ್ಲ ದೈನಿಕವೊಂದು ಡಿ.31ರಂದು ಉಲ್ಲೇಖಿಸಿತ್ತು. ಈ ವಿಷಯದಲ್ಲಿ ಅಧಿಕೃತ ಆದೇಶವನ್ನು ಸರಕಾರವಿನ್ನೂ ಹೊರಡಿಸಬೇಕಿದೆ.

ಎನ್‌ ಪಿಆರ್ ನಮೂನೆಯಲ್ಲಿ ಯಾವ ಪ್ರಶ್ನೆಗಳು ಸ್ವಯಂಪ್ರೇರಣೆಯದ್ದಾಗಿವೆ ಎನ್ನುವ ಬಗ್ಗೆ ಗೊಂದಲ ನಿವಾರಣೆಯಾಗಿಲ್ಲವಾದರೂ ‘2003ರ ಪೌರತ್ವ ನಿಯಮಾವಳಿಗಳಲ್ಲಿ ಈ ಹೆಚ್ಚುವರಿ ಪ್ರಶ್ನೆಗಳಿಗೆ ಕಾನೂನಿನ ಬೆಂಬಲವಿಲ್ಲದಿರುವಾಗ ಯಾವ ಕಾನೂನಿನ ಆಧಾರದಲ್ಲಿ ಅವುಗಳನ್ನು 2020ರ ಎನ್‌ ಪಿಆರ್‌ನಲ್ಲಿ ಸೇರಿಸುವುದಕ್ಕೆ ಕೇಂದ್ರ ಸರಕಾರವು ಮುಂದಾಗಿದೆ? ‘ ಎಂಬ ಅತ್ಯಂತ ಮೂಲಭೂತವಾದ ಪ್ರಶ್ನೆಯೊಂದು ಈಗ ತಲೆಯೆತ್ತಿದೆ.

Writer - Scroll.in, ಶುಐಬ್ ದಾನಿಯಲ್

contributor

Editor - Scroll.in, ಶುಐಬ್ ದಾನಿಯಲ್

contributor

Similar News