ಉ.ಪ್ರದೇಶ: ಸಿಎಎ ಪ್ರತಿಭಟನೆ ಸಂದರ್ಭ ಹಿಂಸಾಚಾರ: ಪೊಲೀಸ್ ಕಾರ್ಯಾಚರಣೆಯ ವರದಿ ಕೇಳಿದ ಹೈಕೋರ್ಟ್

Update: 2020-01-27 16:49 GMT

ಲಕ್ನೊ, ಜ.27: ಪೌರತ್ವ ಕಾಯ್ದೆ ವಿರೋಧಿಸಿ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಸಂದರ್ಭ ಪೊಲೀಸರ ಕಾರ್ಯಾಚರಣೆಯ ಕುರಿತು ವರದಿ ಸಲ್ಲಿಸುವಂತೆ ಉತ್ತರಪ್ರದೇಶ ಸರಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಸೂಚಿಸಿದೆ.

ಪ್ರತಿಭಟನೆ ಸಂದರ್ಭ ನಡೆದ ಹಿಂಸಾಚಾರ ಹಾಗೂ ಆ ಬಳಿಕ ಪೊಲೀಸರ ಕಾರ್ಯಾಚರಣೆಗೆ ಸಂಬಂಧಿಸಿ 7 ಅರ್ಜಿಗಳನ್ನು ಸಲ್ಲಿಸಲಾಗಿದೆ. ರಾಜ್ಯದ ವಿವಿಧೆಡೆ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ಭುಗಿಲೆದ್ದು 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಗುಂಡೇಟಿನಿಂದ ಹೆಚ್ಚಿನ ಸಾವು ಸಂಭವಿಸಿದ್ದರೂ ಪೊಲೀಸರು ಒಂದು ಸಂಭರ್ದಲ್ಲಿ ಮಾತ್ರ ಗೋಲಿಬಾರ್ ನಡೆಸಿರುವುದಾಗಿ ಹೇಳುತ್ತಿದ್ದಾರೆ. ಪ್ರತಿಭಟನಾಕಾರರನ್ನು ನಿಗ್ರಹಿಸುವ ಕಾರ್ಯಾಚರಣೆಗೆ ಸಂಬಂಧಿಸಿ ಸರಕಾರಿ ಅಥವಾ ಪೊಲೀಸ್ ಅಧಿಕಾರಿಗಳ ವಿರುದ್ಧ ಎಷ್ಟು ಪ್ರಕರಣ ದಾಖಲಾಗಿದೆ ಎಂಬ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಸೋಮವಾರ ಹೈಕೋರ್ಟ್ ಕಲಾಪದ ಸಂದರ್ಭ ಸರಕಾರದ ಕಡೆಯಿಂದ ಐದು ಪ್ರಮಾಣಪತ್ರಗಳನ್ನು ಸಲ್ಲಿಸಲಾಗಿದೆ. ನ್ಯಾಯಾಲಯ ಇನ್ನಷ್ಟು ಸ್ಪಷ್ಟನೆ ಕೇಳಿದೆ. ಹಿಂಸಾಚಾರದಲ್ಲಿ ಗುಂಡೇಟಿನ ಗಾಯಕ್ಕೆ ಒಳಗಾದ ಪೊಲೀಸರ ಜಿಲ್ಲಾವಾರು ವಿವರ ನೀಡಿದ್ದೇವೆ. ಹಿಂಸಾಚಾರದ ತರುವಾಯ ದಾಖಲಿಸಿರುವ ಎಫ್‌ಐಆರ್ ಕುರಿತ ವಿವರವನ್ನು ಹೈಕೋರ್ಟ್ ಕೇಳಿದೆ ಎಂದು ರಾಜ್ಯ ಸರಕಾರದ ವಕೀಲ ಮನೀಷ್ ಗೋಯಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News