ಟ್ರಂಪ್ ಪ್ರಾಯೋಜಿತ ಮಧ್ಯಪ್ರಾಚ್ಯ ಶಾಂತಿ ಒಪ್ಪಂದ ಜಾರಿ ಅಸಾಧ್ಯ: ಹಮಾಸ್ ಘೋಷಣೆ

Update: 2020-01-27 17:15 GMT
ಫೈಲ್ ಚಿತ್ರ

ಗಾಝಾ ನಗರ,ಜ.27: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಮುಂದಿನ ವಾರ ಪ್ರಕಟಿಸಲಿರುವ ಮಧ್ಯಪ್ರಾಚ್ಯ ಶಾಂತಿ ಯೋಜನೆಯು ಜಾರಿಗೊಳ್ಳದೆಂದು ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್‌ನ ನಾಯಕ ಇಸ್ಮಾಯೀಲ್ ಹನಿಯಾ ರವಿವಾರ ಘೋಷಿಸಿದ್ದಾರೆ.

‘‘ಶತಮಾನದ ಒಪ್ಪಂದವೆಂದೇ ಬಣ್ಣಿಸಲಾಗಿರುವ ಮಧ್ಯಪ್ರಾಚ್ಯ ಶಾಂತಿ ಯೋಜನೆಯು ಜಾರಿಗೆ ಬರಲಾರದೆಂದು ನಾವು ದೃಢವಾಗಿ ಘೋಷಿಸುತ್ತೇವೆ. ಪೆಲೆಸ್ತೀನಿಯರನ್ನು ಗುರಿಯಾಗಿರಿಸಿರುವ ಈ ನೂತನ ಸಂಚು ವಿಫಲವಾಗಲಿದೆ ಹಾಗೂ ಇಸ್ರೇಲ್ ವಿರುದ್ಧ ತಮ್ಮ ಹೋರಾಟವನ್ನು ಫೆಲೆಸ್ತೀನಿಯರು ನೂತನ ಹಂತದೆಡೆಗೆ ಕೊಂಡೊಯ್ಯುವಂತೆ ಮಾಡಲಿದೆ’’ ಎಂದು ಹನಿಯಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

 ಹನಿಯಾ ಅವರ ಹೇಳಿಕೆಯನ್ನು ಹಮಾಸ್ ಬಿಡುಗಡೆಗೊಳಿಸಿದ ಕೆಲವೇ ತಾಸುಗಳ ಬಳಿಕ ಹಮಾಸ್ ಆಡಳಿತದಲ್ಲಿರುವ ಗಾಝಾ ಪಟ್ಟಿಯಿಂದ ಇಸ್ರೇಲ್‌ನೆಡೆಗೆ ರಾಕೆಟೊಂದನ್ನು ಎಸೆಯಲಾಗಿದೆಯೆದು ಇಸ್ರೇಲ್ ಸೇನೆಯು ತಿಳಿಸಿದೆ.

 ಗಾಝಾಪಟ್ಟಿಯಲ್ಲಿರುವ ಹಮಾಸ್ ನೆಲೆಗಳ ಮೇಲೆ ತಾನು ವಾಯದಾಳಿಗಳನ್ನು ನಡೆಸಿರುವುದಾಗಿ ಇಸ್ರೇಲ್ ಸೇನೆಯು ತಿಳಿಸಿದೆ. ಬಲೂನ್‌ಗಳಿಗೆ ಜೋಡಿಸಲ್ಪಟ್ಟ ದಹನಕಾರಿ ಉಪಕರಣಗಳನ್ನು ಗಾಝಾನೆಲದಿಂದ ಉಡಾಯಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ತಾನು ಈ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.

ರವಿವಾರ ನಡೆದ ರಾಕೆಟ್ ದಾಳಿಯ ಹೊಣೆಯನ್ನು ಹಮಾಸ್ ವಹಿಸಿಕೊಂಡಿಲ್ಲ ಆದರೆ ಇಸ್ರೇಲ್ ಅಕ್ರಮಣದ ವಿರುದ್ಧ ನೂತನ ಹಂತದ ಹೋರಾಟ ನಡೆಸುವ ಫೆಲೆಸ್ತೀನಿಯರ ಹಕ್ಕನ್ನು ಇದು ಮರುಸ್ಥಾಪಿಸಲಿದೆಯೆದು ಅವರು ಹೇಳಿದರು.

 ಈ ಮಧ್ಯೆ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ನೇತೃತ್ವದ ಫತಹ್ ಮೂವ್‌ಮೆಂಟ್ ಸೇರಿದಂತೆ ಇತರ ಕೆಲವು ಫೆಲೆಸ್ತೀನಿ ಗುಂಪುಗಳನ್ನು ಹಮಾಸ್ ಕೈರೋದಲ್ಲಿ ಮಾತುಕತೆಗೆ ಆಹ್ವಾನಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಶಿಂಗ್ಟನ್‌ನಲ್ಲಿ ಸದ್ಯದಲ್ಲೇ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಹಾಗೂ ಅವರ ರಾಜಕೀಯ ಪ್ರತಿಸ್ಪರ್ಧಿ ಬೆನ್ನಿ ಗ್ಯಾಂಟ್ಝ್ ಜೊತೆ ಮಾತುಕತೆ ನಡೆಸಲಿದ್ದು, ಆನಂತರ ಅವರು ಮಧ್ಯಪ್ರಾಚ್ಯ ಶಾಂತಿ ಒಪ್ಪಂದವನ್ನು ಬಹಿರಂಗಪಡಿಸಲಿದ್ದಾರೆ.ಆದರೆ ಈ ಮಾತುಕತೆಗೆ ಫೆಲೆಸ್ತೀನಿಯನ್ ನಾಯಕತ್ವವನ್ನು ಆಹ್ವಾನಿಸಲಾಗಿರಲಿಲ್ಲ. ಜೆರುಸಲೇಂನ್ನು ಇಸ್ರೇಲ್‌ನ ಅವಿಭಜಿತ ರಾಜಧಾನಿಯೆಂದು ಟ್ರಂಪ್ ಮಾನ್ಯತೆ ನೀಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಉದ್ವಿಗ್ನತೆಯ ನಡುವೆ ನೂತನ ಶಾಂತಿ ಯೋಜನೆಯನ್ನು ಹಮಾಸ್ ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News